ಹೊನ್ನಾವರ : ಟಿಪ್ಪರ್ ಹಾಯ್ದು ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಹೊನ್ನಾವರ : ಟಿಪ್ಪರ್ ಹಾಯಿಸಿ ವ್ಯಕ್ತಿಯೊಬ್ಬನನ್ನು ಸಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೆಅಂಗಡಿಯ ಜನತಾ ಕಾಲೋನಿಯ ಬಳಿ ಮಂಗಳವಾರ ರಾತ್ರಿ ನಡೆದಿದೆ. ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರೆಅಂಗಡಿಯ ಓಲ್ವಿನ್ ರವಿ ಲೋಬೋ ಎಂಬವರು ಸಾವಿಗೀಡಾಗಿದ್ದಾರೆ. ಸಾಲ್ಕೋಡಿನಲ್ಲಿ ವಾಸವಿರುವ ಕುಮಟಾ ತಾಲೂಕಿನ ಕೋನಳ್ಳಿ ಮೂಲದ ಜನಾರ್ಧನ ನಾಯ್ಕ ಹಾಗೂ ಹೊಸಾಕುಳಿಯ ಚಾಲಕ ವಸಂತ ಈಶ್ವರ ನಾಯ್ಕ ಗಾಯಗೊಂಡಿದ್ದಾರೆ. ಆರೋಪಿ ಹಡಿನಬಾಳದ ಶೇಡಿಕುಳಿಯ ನಿವಾಸಿ ವಿನಾಯಕ ನಾರಾಯಣ ಭಟ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ.

ಮಂಗಳವಾರ ರಾತ್ರಿ ವೇಳೆ ಆಟೋದಲ್ಲಿ ಓಲ್ವಿನ್, ಜನಾರ್ದನ ನಾಯ್ಕ ಹಾಗೂ ವಸಂತ ನಾಯ್ಕ ಒಟ್ಟಿಗೆ ನಿಂತಿದ್ದ ಸಂದರ್ಭದಲ್ಲಿ ಆಟೋ ಮೇಲೆ ಏಕಾ ಏಕಿ ವಿನಾಯಕ ಭಟ್ಟ ಟಿಪ್ಪರ್ ಹಾಯಿಸಿದ್ದಾನೆ. ಈ ವೇಳೆ ಆಟೋ ಚಾಲಕನಾಗಿದ್ದ ಓಲ್ವಿನ್ ಸ್ಥಳದಲ್ಲೇ ಸಾವಿಗೀಡಾಗಿದ್ದು, ಜನಾರ್ಧನ ನಾಯ್ಕ ಹಾಗೂ ವಸಂತ ನಾಯ್ಕಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಜನಾರ್ಧನ ನಾಯ್ಕ ಹಾಗೂ ಆರೋಪಿ ವಿನಾಯಕ ಭಟ್ಟ ನಡುವೆ ಜಗಳವಾಗಿತ್ತು ಎನ್ನಲಾಗಿದೆ. ಇದೇ ದ್ವೇಷಕ್ಕೆ ತಮ್ಮ ಮೇಲೆ ಟಿಪ್ಪರ್‌ ಹಾಯಿಸಲಾಗಿದೆ ಎಂದು ಘಟನೆಯ ಕುರಿತು ಗಾಯಾಳು ವಸಂತ ಈಶ್ವರ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಇತರರ ನಿವಾಸದ ಮೇಲೆ ಐಟಿ ದಾಳಿ

ಆರೋಪಿ ವಿನಾಯಕ ಭಟ್ ಹಾಗೂ ಜನಾರ್ಧನ ನಾಯ್ಕ ನಡುವೆ ಹಣಕಾಸು ವಿಷಯಕ್ಕೆ ಸಂಬಂಧಿಸಿ ಆರೊಳ್ಳಿ ಸೈಕಲ್ ಅಂಗಡಿಯ ಬಳಿ ಮಂಗಳವಾರ ಸಂಜೆ ೬:೩೦ ಗಂಟೆ ಸುಮಾರಿಗೆ ಜಗಳವಾಗಿದೆ. ಅದೇ ದ್ವೇಷದಿಂದ ನನ್ನನ್ನು ಹಾಗೂ ನನ್ನ ಸ್ನೇಹಿತನನ್ನು ಸಾಯಿಸುವ ಉದ್ದೇಶದಿಂದ ವಿನಾಯಕ ಭಟ್‌ ಮಂಗಳವಾರ ರಾತ್ರಿ ೧೧: ೩೦ ಗಂಟೆ ಸುಮಾರಿಗೆ ಅರೆಅಂಗಡಿಯ ಕಡೆಯಿಂದ ಟಿಪ್ಪರ್‌ ಚಲಾಯಿಸಿಕೊಂಡು ಬಂದು ಅರೆಅಂಗಡಿ ಜನತಾ ಕಾಲೋನಿ ಹತ್ತಿರ ರಸ್ತೆಯಪಕ್ಕದಲ್ಲಿ ಓಲ್ವಿನ್ ಲೋಬೋ ಅವರ ಆಟೋರಿಕ್ಷಾ ಬಳಿ ನಾನು, ಓಲ್ವಿನ್ ಲೋಬೋ, ಜನಾರ್ಧನ ಕೇಶವ ನಾಯ್ಕ ಮಾತನಾಡುತ್ತ ನಿಂತಿದ್ದಾಗ ನಮ್ಮ ಮೇಲೆ ಹಾಯಿಸಿದ್ದಾನೆ ಎಂದು ವಸಂತ ಈಶ್ವರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.
ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿನಾಯಕ ಭಟ್ಟ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement