ಮುಖ್ಯಮಂತ್ರಿ ಕೆಸಿಆರ್‌- ಮುಂದಿನ ಸಿಎಂ ರೇವಂತ ರೆಡ್ಡಿ ಇಬ್ಬರನ್ನೂ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ …!

ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ಅಸಾಮಾನ್ಯ ಗೆಲುವು ಸಾಧಿಸಿದ್ದಾರೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಮತ್ತು ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ತೆಲಂಗಾಣ ಮುಖ್ಯಸ್ಥ ರೇವಂತ ರೆಡ್ಡಿ ಅವರನ್ನು ಸೋಲಿಸಿ ಇಡೀ ದೇಶವನ್ನೇ ಅಚ್ಚರಿಗೊಳಿಸಿದ್ದಾರೆ.
ಕಾಮರೆಡ್ಡಿ ವಿಧಾನಸಭೆಯಲ್ಲಿ ಬಿಜೆಪಿಯ ಕೆವಿಆರ್‌ ಎಂದೇ ಜನಪ್ರಿಯವಾಗಿರುವ ಕಾಟಿಪಲ್ಲಿ ವೆಂಕಟರಮಣ ರೆಡ್ಡಿ ಅವರು ಬಿಆರ್‌ಎಸ್ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರನ್ನು 6,741 ಮತಗಳಿಂದ ಮತ್ತು ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರನ್ನು 11,736 ಮತಗಳಿಂದ ಸೋಲಿಸಿದ್ದಾರೆ.
ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಿ ಮುಖ್ಯಮಂತ್ರಿ ಕೆಸಿಆರ್ ಮತ್ತು ಕಾಂಗ್ರೆಸ್‌ನ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ರೇವಂತ್ ರೆಡ್ಡಿ ಇಬ್ಬರು ಬಲಿಷ್ಠ ನಾಯಕರನ್ನು ಸೋಲಿಸುವ ಮೂಲಕ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದಾರೆ.

2018 ರ ವಿಧಾನಸಭಾ ಚುನಾವಣೆಗೆ ಮುನ್ನ, ರಮಣ ರೆಡ್ಡಿ ಅವರು ಬಿಆರ್‌ಎಸ್ ಕಾರ್ಯಕರ್ತನ ಹತ್ಯೆಯ ಸಂಚು ನಡೆಸಿದ ಆರೋಪದ ನಂತರ ಬಿಜೆಪಿಗೆ ಸೇರಿದರು.
ಬಿಜೆಪಿಯ ವೆಂಕಟ ರಮಣ ರೆಡ್ಡಯ ಅವರು ಒಟ್ಟು 66,652 ಮತಗಳನ್ನು ಪಡೆದರೆ, ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರು 59,911 ಮತಗಳನ್ನು ಪಡೆದರು. ಕಾಂಗ್ರೆಸ್‌ನ ರೇವಂತ್ ರೆಡ್ಡಿ 54,916 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.
ಮೊದಲ ಕೆಲವು ಸುತ್ತುಗಳಲ್ಲಿ ರೇವಂತ್ ಮುನ್ನಡೆ ಸಾಧಿಸಿದ್ದರೆ, ಸುತ್ತುಗಳು ಸಾಗುತ್ತಿದ್ದಂತೆ ಅವರ, ವೆಂಕಟ ರಮಣ ಮತ್ತು ಕೆಸಿಆರ್ ನಡುವಿನ ಮತಗಳ ಅಂತರ ಕಡಿಮೆಯಾಗುತ್ತ ಬಂತು. 13ನೇ ಸುತ್ತಿನಲ್ಲಿ ವೆಂಕಟ ರಮಣ ಮುನ್ನಡೆ ಸಾಧಿಸುವ ಮೂಲಕ ಕೆಸಿಆರ್ ಮತ್ತು ರೇವಂತ್ ಅವರನ್ನು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಿದರು. ಅಂತಿಮವಾಗಿ ಎರಡು ದೊಡ್ಡ ನಾಯಕರನ್ನು ಸೋಲಿಸಿದರು.
ರೇವಂತ್ ಮತ್ತು ಕೆಸಿಆರ್ ಇಬ್ಬರೂ ಉನ್ನತ ಅಭ್ಯರ್ಥಿಗಳಾಗಿದ್ದರೂ ಮತದಾರರು ಅವರನ್ನು ‘ಹೊರಗಿನವರು’ ಎಂದು ನೋಡಿದರು. ರೇವಂತ್ ಮತ್ತು ಕೆಸಿಆರ್ ಕ್ರಮವಾಗಿ ಇತರ ಕ್ಷೇತ್ರಗಳಾದ ಕೊಡಂಗಲ್ ಮತ್ತು ಗಜ್ವೇಲ್‌ನಿಂದ ಸ್ಪರ್ಧಿಸುತ್ತಿರುವುದರಿಂದ, ಸಾಂಪ್ರದಾಯಿಕ ಸ್ಥಾನಗಳನ್ನು ಗೆದ್ದರೆ ಕಾಮರೆಡ್ಡಿ ಸ್ಥಾನವನ್ನು ತೆರವು ಮಾಡುವ ಸಾಧ್ಯತೆಯಿದೆ ಎಂದು ವೆಂಕಟ ರಮಣ ಮತದಾರರ ಮುಂದೆ ಪರಿಣಾಮಕಾರಿಯಾಗಿ ಬಿಂಬಿಸಿದ್ದು ಅವರಿಗೆ ವರವಾಯಿತು.

ಪ್ರಮುಖ ಸುದ್ದಿ :-   ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ...

ಮುಖ್ಯಮಂತ್ರಿ ಚಂದ್ರಶೇಕರ ರಾವ್‌ ಹಾಗೂ ಕಾಂಗ್ರೆಸ್ಸಿನ ರೇವಂತ ರೆಡ್ಡಿ ಅಇಬ್ಬರೂ ಬೇರೆ ಕ್ಷೇತ್ರಗಳಿಂದಲೂ ಸ್ಪರ್ಧಿಸಿದ್ದು ಅಲ್ಲಿ ವಿಜಯಗಳಿಸಿದ್ದಾರೆ.
ವೃತ್ತಿಯಲ್ಲಿ ಉದ್ಯಮಿಯಾಗಿರುವ ಕೆವಿಆರ್ ಅವರು ತಮ್ಮ ರಾಜಕೀಯ ಪಯಣವನ್ನು ಕಾಂಗ್ರೆಸ್ ನಿಂದ ಆರಂಭಿಸಿದ್ದರು. ಅವರು 2004 ರಲ್ಲಿ ಹಿಂದಿನ ನಿಜಾಮಾಬಾದ್ ಜಿಲ್ಲೆಯ ಮಂಡಲ ಪರಿಷತ್ ಪ್ರಾದೇಶಿಕ ಪರಿಷತ್ತಿನ ಸದಸ್ಯರಾಗಿದ್ದರು.
ನಂತರ ಅವರು ಜಿಲ್ಲಾ ಪರಿಷತ್ತಿನ ಪ್ರಾದೇಶಿಕ ಕೌನ್ಸಿಲ್ ಸದಸ್ಯರಾದರು ಮತ್ತು ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಹಿಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ (ವೈಎಸ್ಆರ್) ಅವರ ಮರಣದ ನಂತರ, ಕೆವಿಆರ್ 2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್‌ (ಆಗ ಟಿಆರ್‌ ಎಸ್‌) ಪಕ್ಷವನ್ನು ಬೆಂಬಲಿಸಲು ಪ್ರಾರಂಭಿಸಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement