ಹಿಂದಿ ರಾಜ್ಯಗಳಿಗೆ ʼಗೋ ಮೂತ್ರʼ ರಾಜ್ಯಗಳೆಂದು ಟೀಕಿಸಿದ ಡಿಎಂಕೆ ಸಂಸದ : ಹೇಳಿಕೆಗೆ ಪಕ್ಷಾತೀತವಾಗಿ ಖಂಡನೆ ನಂತರ ಸೆಂಥಿಲ್ ಕುಮಾರ ಕ್ಷಮೆಯಾಚನೆ

ನವದೆಹಲಿ: ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ ಅವರು ಸಂಸತ್ತಿನಲ್ಲಿ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿ ಪಕ್ಷಾತೀತವಾಗಿ ಟೀಕೆ ಎದುರಿಸಿದ ನಂತರ ಹೇಳಿಕೆಗಾಗಿ ಬುಧವಾರ ಕ್ಷಮೆಯಾಚಿಸಿದ್ದಾರೆ.
ಧರ್ಮಪುರಿ ಸಂಸದರ ಹೇಳಿಕೆಗೆ ಬಿಜೆಪಿ ಮತ್ತು ಡಿಎಂಕೆ ಮಿತ್ರಪಕ್ಷ ಕಾಂಗ್ರೆಸ್‌ನಿಂದ ತಕ್ಷಣವೇ ಖಂಡನೆ ವ್ಯಕ್ತವಾಗಿದ್ದು, ಅವರು ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಸದನದಲ್ಲಿ ಜೆ & ಕೆ ಮರುಸಂಘಟನೆ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಸೆಂಥಿಲ್‌ ಕುಮಾರ ಅವರು, ಬಿಜೆಪಿಯು ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಮಾತ್ರ ಚುನಾವಣೆಗಳನ್ನು ಗೆಲ್ಲುತ್ತದೆ ಮತ್ತು ದಕ್ಷಿಣ ಭಾರತದಲ್ಲಿ ಅಲ್ಲ ಎಂದು ಹೇಳಿದರು. ಅವರು ಹಿಂದಿಯ ಹೃದಯಭಾಗವನ್ನು “ಗೌಮೂತ್ರ” ರಾಜ್ಯಗಳೆಂದು ಬಣ್ಣಿಸಿದರು.

ಇದಕ್ಕೆ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಹಾಗೂ ಸ್ವಪಕ್ಷದಿಂದಲೇ ಭಾರೀ ಟೀಕೆ ವ್ಯಕ್ತವಾದ ನಂತರ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸೆಂಥಿಲ್, “ನಾನು ನಿನ್ನೆ ಅಚಾತುರ್ಯದಿಂದ ನೀಡಿದ ಹೇಳಿಕೆಯಿಂದ ಸದಸ್ಯರು ಮತ್ತು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಅದನ್ನು ಹಿಂಪಡೆಯುತ್ತೇನೆ, ಪದಗಳನ್ನು ಹೊರಹಾಕಲು ನಾನು ವಿನಂತಿಸುತ್ತೇನೆ… ನನ್ನ ಹೇಳಿಕೆಗೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ಡಿಎಂಕೆ ಛೀಮಾರಿ
ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪಕ್ಷದ ಸಂಸದ ಡಿಎನ್‌ವಿ ಸೆಂಥಿಲ್‌ಕುಮಾರ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಹೃದಯಭೂಮಿಯನ್ನು “ಗೋಮೂತ್ರ ರಾಜ್ಯಗಳು” ಎಂದು ಬಣ್ಣಿಸಿದ ಪಕ್ಷದ ಸಂಸದ ಸೆಂಥಿಲ್‌ಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪಕ್ಷವು ಮಂಗಳವಾರ ಹೇಳಿದೆ. ಡಿಎಂಕೆ ಯಾವಾಗಲೂ ಸಾರ್ವಜನಿಕ ಟೀಕೆಗಳನ್ನು ಮಾಡುವಾಗ ಗೌರವಾನ್ವಿತ ವಿಧಾನದ ಅಗತ್ಯವನ್ನು ಒತ್ತಾಯಿಸುತ್ತದೆ ಎಂದು ಪಕ್ಷವು ಹೇಳಿದೆ.

ಪಕ್ಷಾತೀತವಾಗಿ ಟೀಕೆ
ಡಿಎಂಕೆ ಸಂಸದರ ಹೇಳಿಕೆಯು ಇಂಡಿಯಾ (I.N.D.I.A ) ಮೈತ್ರಿಕೂಟದ ಪಕ್ಷಗಗಳು ಸೇರಿದಂತೆ ಅನೇಕ ಪಕ್ಷಗಳಿಂದ ಟೀಕೆಗೊಳಗಾಗಿದೆ. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಈ ಹೇಳಿಕೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಡಿಎಂಕೆ ಸಂಸದರೊಬ್ಬರ ಅವಹೇಳನಕಾರಿ ಹೇಳಿಕೆಗೆ ಆಘಾತಕಾರಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರವರ ಇಚ್ಛೆಯಂತೆ ಮತದಾನದ ಹಕ್ಕಿದೆ. ಆದರೆ ಅದಕ್ಕಾಗಿ ಅವರನ್ನು ಕೀಳಾಗಿ ಕಾಣುವುದು ಸಂಪೂರ್ಣವಾಗಿ ಅನಪೇಕ್ಷಿತ ಮತ್ತು ಸ್ವೀಕಾರಾರ್ಹವಲ್ಲ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಮುಫ್ತಿ ಹೇಳಿದ್ದಾರೆ.
“ಪದಗಳ ಅತ್ಯಂತ ದುರದೃಷ್ಟಕರ ಆಯ್ಕೆ ಹಾಗೂ ಅಸಂಸದೀಯ. ಸೆಂಥಿಲ್ ಕುಮಾರ ಅವರು ಕೂಡಲೇ ಕ್ಷಮೆಯಾಚಿಸಬೇಕು ಮತ್ತು ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ ಎಕ್ಸ್ ನಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement