
ರಾಯಚೂರು : ಟಾಟಾ ಏಸ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.
ಮೃತರನ್ನು ಇಸ್ಮಾಯಿಲ್(25), ಚನ್ನಬಸವ (26), ರವಿ(21) ಮತ್ತು ಅಂಬರೀಷ(20) ಎಂದು ಗುರುತಿಸಲಾಗಿದೆ.
ಟಾಟಾ ಏಸ್ ವಾಹನದಲ್ಲಿ ಐದು ಮಂದಿ ಸಿಂಧನೂರಿನಿಂದ ಮಸ್ಕಿ ತಾಲೂಕಿನ ಮದ್ಲಾಪುರಕ್ಕೆ ಮದುವೆ ಸಮಾರಂಭ ಡೆಕೋರೇಟ್ ಮಾಡಲು ಸಾಮಾಗ್ರಿಗಳನ್ನು ತೆಗೆದುಕೊಂಡು ಗುರುವಾರ ಬೆಳಗಿನ ಜಾಗ ಹೋಗುತ್ತಿದ್ದಾಗ ಪಗಡದಿನ್ನಿ ಕ್ಯಾಂಪ್ ಬಳಿ ಅತಿ ವೇಗವಾಗಿ ಬಂದ ಲಾರಿ ಟಾಟಾ ಏಸ್‍ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟಿದ್ದು ಸಮೀರ ಎಂಬಾತ ಗಾಯಗೊಂಡಿದ್ದಾರೆ. ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಿಂದನೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ವಾಹನದೊಳಗೆ ಸಿಲುಕಿದ್ದ ಮೃತ ನಾಲ್ವರ ಮೃತದೇಹಗಳನ್ನು ಹೊರಗೆ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ