ಭಗವದ್ಗೀತೆಯ ಪ್ರಧಾನ ವಿಷಯವೇ ಮೈಂಡ್ ಮ್ಯಾನೇಜ್ಮೆಂಟ್ : ಸ್ವರ್ಣವಲ್ಲೀ ಶ್ರೀಗಳು

 

ಬೆಳಗಾವಿ: ಭಗವದ್ಗೀತೆಯ ಪ್ರಧಾನ ವಿಷಯವೇ ಮನಸ್ಸಿನ ನಿಯಂತ್ರಣ ಅಥವಾ ಮೈಂಡ್ ಮ್ಯಾನೇಜ್ಮೆಂಟ್. ಮನಸ್ಸನ್ನು ಸರಿಯಾಗಿ ನಿಯಂತ್ರಿಸುವವನು ಉತ್ತಮ ಮ್ಯಾನೇಜರ್ ಆಗಲು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹೇಳಿದ್ದಾರೆ.
ಇಲ್ಲಿಯ ಭರತೇಶ್ ಗ್ಲೋಬಲ್ ಬಿಸಿನೆಸ್ ಸ್ಕೂಲ್ ಆವರಣದಲ್ಲಿ ಶನಿವಾರ ನಡೆದ ಭಗವದ್ಗೀತೆ ಮತ್ತು ಮ್ಯಾನೇಜ್ಮೆಂಟ್‌ ಎಂಬ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಹ ನಕಾರಾತ್ಮಕ ವಿಷಯಗಳನ್ನು ನಿಯಂತ್ರಿಸುವ ಅಗತ್ಯವಿದೆ. ಅಹಂಕಾರ ತ್ಯಜಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಮನಸ್ಸನ್ನು ನಿಯಂತ್ರಣ ಮಾಡುವುದು ಹೇಗೆ ಎನ್ನುವುದನ್ನು ಭಗವದ್ಗೀತೆ ಕಲಿಸುತ್ತದೆ ಎಂದು ಹೇಳಿದರು.

ಮ್ಯಾನೇಜ್ಮೆಂಟ್ ವಿಷಯದಲ್ಲಿ ಭಗವದ್ಗೀತೆಯ ಅಂತರ್ ದೃಷ್ಟಿ ಏನಿದೆ ಎನ್ನುವುದನ್ನು ಬೆಳಕಿಗೆ ತರುವುದೇ ಈ ವಿಚಾರಸಂಕಿರಣದ ಉದ್ದೇಶ. ಪ್ರತಿಯೊಂದಕ್ಕೂ ಹೊರಗಿನ ದೃಷ್ಟಿ ಮತ್ತು ಒಳಗಿನ ದೃಷ್ಟಿ ಎಂದು ಇರುತ್ತದೆ. ಭಗವದ್ಗೀತೆಯ ಪ್ರಧಾನ ವಿಷಯ ಮೈಂಡ್ ಮ್ಯಾನೇಜ್ಮೆಂಟ್ ಅಥವಾ ಮನಸ್ಸಿನ ನಿಯಂತ್ರಣ. ನಾವು ಮುಂದೆ ಹೋಗುತ್ತಿರಬೇಕು. ಆದರೆ ಆಸೆಗಳಿಂದ ಕೂಡಿರುವುದು ಒಳ್ಳೆಯ ಲಕ್ಷಣ ಅಲ್ಲ. ಆಸೆಗಳನ್ನು ಬೆನ್ನತ್ತಿ ಕೆಲಸ ಮಾಡುವುದು ಒಳ್ಳೆಯದಲ್ಲ. ಕಾರ್ಯದಲ್ಲಿ ಸಫಲವಾದರೆ ಖುಷಿ ಪಡುವುದು ಹಾಗೂ ಅಸಫಲ ಆದರೆ ದುಃಖ ಪಡುವುದು ಆಗಬಾರದು. ಬೇರೆಯವರಿಗೆ ತೊಂದರೆ ಕೊಡದೆ ಬಂದಿದ್ದನ್ನೆಲ್ಲ ಸಮಾನ ದೃಷ್ಟಿಕೊನದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.ಬೆಳಗಾವಿಯ ಭಗವದ್ಗೀತೆ ಅಭಿಯಾನಕ್ಕೆ ಭರತೇಶ ಶಿಕ್ಷಣ ಸಂಸ್ಥೆಯ ಸಹಕಾರ ಹಿಂದಿನಿಂದಲೂ ಉತ್ತಮ ರೀತಿಯಲ್ಲಿದೆ ಎಂದು ಶ್ರೀಗಳು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

ವ್ಯಾಸ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ರಾಮಚಂದ್ರ ಭಟ್ ಕೋಟೆಮನೆ ದಿಕ್ಸೂಚಿ ಭಾಷಣ ಮಾಡಿದರು. ಸಕಾರಾತ್ಮಕವಾಗಿ ಯೋಚಿಸುವುದು ಹೇಗೆ? ಸಕಾರಾತ್ಮಕ ಚಿಂತನೆಗಳಿಂದ ಆಗುವ ಪ್ರಯೋಜನವೇನು ಎನ್ನುವುದನ್ನು ಭಗವದ್ಗೀತೆ ಕಲಿಸಿಕೊಡುತ್ತದೆ. ಕ್ಲಿಷ್ಟಕರ ಸಂದರ್ಭವನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನೂ ಕಲಿಸಿಕೊಡುತ್ತದೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ವಿಷಯಗಳೇ ಹೆಚ್ಚು ಪ್ರಚಾರವಾಗುತ್ತಿವೆ. ಪಠ್ಯ ಪುಸ್ತಕಗಳಲ್ಲಿ ಸಹ ನಕಾರಾತ್ಮಕ ಅಂಶಗಳೇ ತುಂಬಿವೆ. ಭಾರತದ ಸಮನ್ವಯ, ಸಾಮರಸ್ಯಕ್ಕಾಗಿ ಭಗವದ್ಗೀತೆ ಅಗತ್ಯವಿದೆ ಎಂದು ಅವರು ಹೇಳಿದರು.
ಮಾತೃ ಭಾಷೆಯಲ್ಲಿ ಅಧ್ಯಯನ ಮಾಡಿದಾಗ ಭಗವದ್ಗೀತೆ ಸರಿಯಾಗಿ ಅರ್ಥವಾಗಲಿದೆ. ಭಗವದ್ಗೀತೆಯ ತಾತ್ಪರ್ಯ ಅರ್ಥವಾಗುತ್ತದೆ. ಭಾರತೀಯ ಪರಂಪರೆ ಭಗವದ್ಗೀತೆಯ ತಳಹದಿಯ ಮೇಲೆ ನಿಂತಿದೆ ಎಂದು ರಾಮಚಂದ್ರ ಭಟ್ ಅಭಿಪ್ರಾಯಪಟ್ಟರು.

ಶಿರಳಗಿಯ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಭಗವದ್ಗೀತೆ ದೈನಂದಿನ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂಬ ಬಗ್ಗೆ ವಿವರಿಸಿದರು. ಬೆಂಗಳೂರು ಐಐಎಂನ ಪ್ರೊ.ಬಿ.ಮಹಾದೇವನ್, ಅಮರಾವತಿಯ ಅಮೃತ ವಿದ್ಯಾಪೀಠದ ಡಾ.ಅನಂತ ಶರ್ಮಾ, ಬೆಂಗಳೂರು ಎನ್ಎಸ್ ಬಿಯ ನಿರ್ದೇಶಕ ಡಾ. ಶ್ರೀನಿಧಿ ಪಾರ್ಥಸಾರಥಿ ಭಗವದ್ಗೀತೆಯ ವಿವಿಧ ಆಯಾಮಗಳ ಮೇಲೆ ಉಪನ್ಯಾಸ ನೀಡಿದರು.
ಪ್ರಸಾದ ದಡ್ಡೀಕರ್ ಸ್ವಾಗತಿಸಿದರು. ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಪ್ರಾಸ್ತಾವಿಕ ಭಾಷಣ ಮಾಡಿದರು. ಗೋಪಾಲ ಜಿನಗೌಡ, ವಿನೋದ ದೊಡ್ಡಣ್ಣವರ, ಶ್ರೀಪಾದ ಖೇಮಲಾಪುರೆ, ಅಶೋಕ ಧನವಾಡೆ ಫಲ ಸಮರ್ಪಣೆ ಮಾಡಿದರು. ಗೀತಾ ಹೆಗಡೆ ಮತ್ತು ಸುನಂದಾ ಹೆಗಡೆ ಧ್ಯಾನ ಶ್ಲೋಕ ಹಾಡಿದರು. ಮಹಾವೀರ ಉಪಾಧ್ಯೆ, ಅನುಪಮಾ ಶಿರಹಟ್ಟಿ, ವಸಂತ ಕೊಡಚವಾಡ, ಭರತೇಶ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್, ವಿದ್ವಾನ್ ಅರುಣ ಹೆಗಡೆ, ವೆಂಕಟ್ರಮಣ ಹೆಗಡೆ, ಗಣೇಶ ಹೆಗಡೆ, ಶ್ರೀಧರ ಗುಮ್ಮಾನಿ ಮೊದಲಾದವರಿದ್ದರು. ಡಾ.ಪದ್ಮಪ್ರಿಯಾ ಕಟಗಲ್ ಸಮಗ್ರ ವರದಿ ಮಂಡಿಸಿದರು. ಸ್ವಾತಿ ಜೋಗ ನಿರೂಪಿಸಿದರು. ಪ್ರೊ.ರಂಜನಾ ಉಪಾಶೆ ವಂದಿಸಿದರು.

ಪ್ರಮುಖ ಸುದ್ದಿ :-   ಪತಿ ಸಾವಿನ ಸುದ್ದಿ ತಿಳಿದ ನಂತರವೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪತ್ನಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement