ಮಡಿಕೇರಿ: ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ದಂಪತಿ, ಮಗಳ ಮೃತದೇಹ ಮಡಿಕೇರಿ ತಾಲೂಕಿನ ಕಡಗದಾಳು ಹೋಮ್‌ಸ್ಟೇನಲ್ಲಿ ಶನಿವಾರ ಪತ್ತೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ತಿದುಬಂದಿಲ್ಲ. ಮೃತರನ್ನು ಕೇರಳದ ಕೊಲ್ಲಂ ನಿವಾಸಿ ವಿನೋದ್ (41), ಝುಬಿ ಅಬ್ರಹಾಂ (37), ಜೋಹನ್ (11) ಎಂದು ಹೇಳಲಾಗಿದೆ. ತಮ್ಮ ಮಗಳು ಜೋಹನ್ ಅವಳನ್ನು ಮೊದಲು ಸಾಯಿಸಿ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಶುಕ್ರವಾರ ಸಂಜೆ 6 ಗಂಟೆಗೆ ಈ ದಂಪತಿ ತಮ್ಮ ಮಗಳೊಂದಿಗೆ ಹೋಂಸ್ಟೇಗೆ ತೆರಳಿದ್ದರು. ರಾತ್ರಿ ಮಲಗುವ ಮುನ್ನ ಸ್ವಲ್ಪ ಹೊತ್ತು ಕೇರಂ ಆಡಿದ್ದರು ಮತ್ತು ಕುಟುಂಬ ಲವಲವಿಕೆಯಿಂದ ಇತ್ತು ಎಂದು ಹೋಂಸ್ಟೇ ಆಡಳಿತ ಮಂಡಳಿ ತಿಳಿಸಿದೆ.
ಆದರೆ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಿಬ್ಬಂದಿ ಬಾಗಿಲು ತಟ್ಟಿದರೂ ಸ್ಪಂದಿಸದ ಕಾರಣ ಕಿಟಕಿಯ ಮೂಲಕ ಕೊಠಡಿಯೊಳಗೆ ಇಣುಕಿ ನೋಡಿದಾಗ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ