ನವದೆಹಲಿ: ಕೇಂದ್ರ, ಅಸ್ಸಾಂ ಸರ್ಕಾರ ಮತ್ತು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ನಡುವಿನ ತ್ರಿಪಕ್ಷೀಯ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ದೆಹಲಿಯಲ್ಲಿ ಸಹಿ ಹಾಕಲಾಯಿತು. ಆ ಮೂಲಕ ಭಾರತದ ಈಶಾನ್ಯ ಪ್ರದೇಶದಲ್ಲಿನ ಅತಿದೊಡ್ಡ ದಂಗೆಕೋರ ಗುಂಪುಗಳ ಶಸ್ತ್ರಸಜ್ಜಿತ ಹೋರಾಟಕ್ಕೆ ತೆರೆ ಬಿದ್ದಿದೆ.
ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಅಮಿತ್ ಶಾ ಅವರು, “ಇಂದು ಅಸ್ಸಾಂನ ಭವಿಷ್ಯದ ಉಜ್ವಲ ದಿನವಾಗಿರುವುದು ನನಗೆ ಸಂತೋಷದ ವಿಷಯವಾಗಿದೆ. ದೀರ್ಘಕಾಲದವರೆಗೆ ಅಸ್ಸಾಂ ಮತ್ತು ಈಶಾನ್ಯವು ಹಿಂಸಾಚಾರವನ್ನು ಎದುರಿಸುತ್ತಿತ್ತು” ಎಂದು ಹೇಳಿದ್ದಾರೆ.
ಜ್ಞಾಪಕ ಪತ್ರಕ್ಕೆ ಉಲ್ಫಾ ಸಹಿ ಹಾಕಿರುವುದು ಇಡೀ ಈಶಾನ್ಯಕ್ಕೆ ಮತ್ತು ವಿಶೇಷವಾಗಿ ಅಸ್ಸಾಂಗೆ ಶಾಂತಿಯ ಹೊಸ ಶಕೆಯ ಆರಂಭವನ್ನು ಸೂಚಿಸುತ್ತದೆ. ಅಸ್ಸಾಂ ರಾಜ್ಯವು ಬಂಡುಕೋರರ ಗುಂಪುಗಳ ಹಿಂಸಾಚಾರದಿಂದ ರಾಜ್ಯವು ದೀರ್ಘಕಾಲದಿಂದ ಬಳಲುತ್ತಿದೆ ಮತ್ತು 1979ರಿಂದ ಇಂತಹ ಹಿಂಸಾಚಾರದಲ್ಲಿ 10,000 ಜನರು ಮೃತಪಟ್ಟಿದ್ದಾರೆ ಎಂದು ಅಮಿತ್ ಶಾ ಹೇಳಿದರು.
“ಭಾರತ ಸರ್ಕಾರದ ಬಗ್ಗೆ ನೀವು ಇಟ್ಟುಕೊಂಡಿರುವ ನಂಬಿಕೆ, ಗೃಹ ಸಚಿವಾಲಯದ ಕಡೆಯಿಂದ, ನೀವು ಕೇಳದೆಯೇ ಎಲ್ಲವನ್ನೂ ಪೂರೈಸಲು ಸಮಯಕ್ಕೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ನಾನು ಉಲ್ಫಾ ಪ್ರತಿನಿಧಿಗಳಿಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಗೃಹ ಸಚಿವಾಲಯದ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗುವುದು, ಇದು ಜ್ಞಾಪಕ ಪತ್ರದ ಅಡಿಯಲ್ಲಿ ಮಾಡಿಕೊಂಡ ಒಪ್ಪಂದಗಳಂತೆ ಕಾರ್ಯಕ್ರಮದ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಉಲ್ಫಾದ ಎಲ್ಲಾ ಸಮಂಜಸವಾದ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಪೂರೈಸುವುದನ್ನು ಕೇಂದ್ರವು ಖಚಿತಪಡಿಸುತ್ತದೆ ಮತ್ತು ಸಂಘಟನೆಯಾಗಿ ಉಲ್ಫಾ ವಿಸರ್ಜಿಸನೆಗೊಳ್ಳಲಿದೆ ಎಂದು ಹೇಳಿದ್ದಾರೆ.
ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳ ಅನೇಕ ಪ್ರದೇಶಗಳಿಂದ ಸಶಸ್ತ್ರ ಪಡೆಗಳ (ವಿಶೇಷ) ಅಧಿಕಾರಗಳ ಕಾಯಿದೆ (ಎಎಫ್‌ಎಸ್‌ಪಿಎ) ತೆಗೆದುಹಾಕುವಿಕೆಯು ಈ ಪ್ರದೇಶದಲ್ಲಿ ದಂಗೆಯು ಬಹುತೇಕ ನಿರ್ನಾಮವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ ಎಂದು ಅಮಿತ್ ಶಾ ಹೇಳಿದರು.
ಹಿಮಂತ ಬಿಸ್ವಾ ಶರ್ಮಾ ಅವರು ಇದನ್ನು ಅಸ್ಸಾಂಗೆ “ಐತಿಹಾಸಿಕ ದಿನ” ಎಂದು ಕರೆದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಸುಮಾರು 8,756 ಉಗ್ರಗಾಮಿ ಸಂಘಟನೆಗಳ ಸದಸ್ಯರು ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಹೇಳಿದರು.
ಈ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾಯಿತು ಮತ್ತು 1990ರಲ್ಲಿ ಭಾರತದಲ್ಲಿ ನಿಷೇಧಿಸಲಾಯಿತು. 2011 ರಲ್ಲಿ, ಸಂಘಟನೆ ಕೇಂದ್ರ ಸರ್ಕಾರ ಮತ್ತು ಅಸ್ಸಾಂ ಸರ್ಕಾರದೊಂದಿಗೆ ಕಾರ್ಯಾಚರಣೆಗಳ ಅಮಾನತು (SoO) ಗಾಗಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತು.
ಪರೇಶ ಬರುವಾ ನೇತೃತ್ವದ ಉಲ್ಫಾ (ಸ್ವತಂತ್ರ) ಬಣ ಮಾತುಕತೆಗೆ ವಿರೋಧ ವ್ಯಕ್ತಪಡಿಸಿದೆ. ಅಸ್ಸಾಂನ ಅತ್ಯಂತ ಹಳೆಯ ದಂಗೆಕೋರ ಗುಂಪಿನೊಂದಿಗಿನ ಶಾಂತಿ ಒಪ್ಪಂದವು ಅಕ್ರಮ ವಲಸೆ, ಸ್ಥಳೀಯ ಸಮುದಾಯಗಳಿಗೆ ಭೂಮಿಯ ಹಕ್ಕುಗಳು ಮತ್ತು ಅಸ್ಸಾಂನ ಅಭಿವೃದ್ಧಿಗೆ ಹಣಕಾಸಿನ ಪ್ಯಾಕೇಜ್ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ಈಶಾನ್ಯ ಭಾಗದ ಬಂಡುಕೋರ ಗುಂಪುಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಒಪ್ಪಿಕೊಂಡ ನಂತರ ಮೋದಿ ಸರ್ಕಾರವು ಅನೇಕ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದೆ. ನವೆಂಬರ್‌ನಲ್ಲಿ, ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪು UNLF ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು.
ಏಪ್ರಿಲ್ 7, 1979 ರಂದು ಅಸ್ಸಾಂನ ಶಿವಸಾಗರದಲ್ಲಿ ಸ್ಥಾಪನೆಯಾದ ಉಲ್ಫಾ ಸ್ಥಳೀಯ ಅಸ್ಸಾಮಿ ಜನರಿಗೆ ಸ್ವತಂತ್ರ ಸಾರ್ವಭೌಮ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಹೊರಹೊಮ್ಮಿತು. ಪರೇಶ್ ಬರುವಾ, ಅರಬಿಂದಾ ರಾಜ್‌ಖೋವಾ ಮತ್ತು ಅನುಪ್ ಚೇಟಿಯಾ ಅವರ ನೇತೃತ್ವದಲ್ಲಿ 1980 ರ ದಶಕದ ಉತ್ತರಾರ್ಧದಲ್ಲಿ ಈ ಗುಂಪು ತನ್ನ ಸಶಸ್ತ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಆರಂಭದಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡುವ ಗುಂಪು ಎಂದು ಗ್ರಹಿಸಲ್ಪಟ್ಟ ಉಲ್ಫಾದ ತಂತ್ರಗಳು ಶೀಘ್ರದಲ್ಲೇ ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟದ ವರೆಗೆ ಮುಂದುವರಿಯಿತು.
ಉಲ್ಫಾ ನಂತರದಲ್ಲಿ ಪ್ರಮುಖ ಚಹಾ ತೋಟಗಾರ ಮತ್ತು ಲಾರ್ಡ್ ಸ್ವರಾಲ ಪಾಲ ಅವರ ಸಹೋದರ ಸುರೇಂದ್ರ ಪಾಲ ಅವರ ಹತ್ಯೆ, ಸುಲಿಗೆಗಳು ಮತ್ತು ಟೀ ಎಸ್ಟೇಟ್ ಮಾಲೀಕರಿಗೆ ಬೆದರಿಕೆಗಳಂತಹ ಘಟನೆಗಳಲ್ಲಿ ಪಾಲ್ಗೊಂಡಿತು. ಈ ಘಟನೆಗಳು ಭಾರತ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ಬೀರಿತು, ಇದು ಉಲ್ಫಾ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಕಾರಣವಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ