ನವದೆಹಲಿ: ಸರಣಿ ಸಭೆಗಳು ಮತ್ತು ಚರ್ಚೆಗಳ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶನಿವಾರ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್‌ನ ಅಧ್ಯಕ್ಷರನ್ನಾಗಿ ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆಗೆ ಕಾಯಬೇಕಿದೆ ಎಂದು ಕೆಲವು ರಾಷ್ಟ್ರೀಯ ಸುದ್ದಿ ಮಧ್ಯಮಗಳು ವರದಿ ಮಾಡಿವೆ.
ಸೀಟು ಹಂಚಿಕೆ ಕಾರ್ಯಸೂಚಿ, “ಭಾರತ್ ಜೋಡೊ ನ್ಯಾಯ ಯಾತ್ರೆ”ಯಲ್ಲಿ ಭಾಗವಹಿಸುವಿಕೆ ಮತ್ತು ಮೈತ್ರಿಕೂಟಕ್ಕೆ ಸಂಬಂಧಿಸಿದ ಇತರ ವಿಷಯಗಳ ಕುರಿತು ಶನಿವಾರ ಇಂಡಿಯಾ ಮೈತ್ರಿಕೂಟದ 14 ಪಕ್ಷಗಳ ನಾಯಕರು ವರ್ಚುವಲ್ ಸಭೆ ನಡೆಸಿದ ನಂತರ ಈ ಸುದ್ದಿ ಹೊರಬಂದಿದೆ.
ಏತನ್ಮಧ್ಯೆ, ಸಭೆಯಲ್ಲಿದ್ದ ಮುಖಂಡರು ಬಿಹಾರ ಮುಖ್ಯಮಂತ್ರಿನಿತೀಶಕುಮಾರ ಅವರನ್ನು ಇಂಡಿಯಾ ಮೈತ್ರಿಕೂಟದ ಸಂಚಾಲಕರನ್ನಾಗಿ ನೇಮಿಸಲು ನಿರ್ಧರಿಸಿದರು. ಆದರೆ, ನಿತೀಶಕುಮಾರ ಅವರು ತಾವು ಯಾವುದೇ ಸ್ಥಾನಮಾನದ ಹಿಂದೆ ಬಿದ್ದಿಲ್ಲ ಎಂದು ಹೇಳಿದರು. ಹಾಗೂ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಲ್ಲ ಪಕ್ಷಗಳು ಒಮ್ಮತಕ್ಕೆ ಬಂದಾಗ ಮಾತ್ರ ಪಾತ್ರವನ್ನು ಒಪ್ಪಿಕೊಳ್ಳುವುದಾಗಿ ಹೇಳಿ ಸಂಚಾಲಕ ಹುದ್ದೆಯನ್ನು ತಿರಸ್ಕರಿಸಿದರು ಎಂದು ಹೇಳಲಾಗಿದೆ.
ಸಭೆಯಲ್ಲಿ ಕಾಂಗ್ರೆಸ್ ನಾಯಕರು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇಂಡಿಯಾ ಬ್ಲಾಕ್‌ನ ವಿವಿಧ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಿದ್ದರು.
ಶನಿವಾರ ನಡೆದ ವರ್ಚುವಲ್ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ಬಹುತೇಕ ಘಟಕಗಳು ನಿತೀಶಕುಮಾರ ಅವರನ್ನು ಇಂಡಿಯಾ ಮೈತ್ರಿಕೂಟದ ಸಂಚಾಲಕರನ್ನಾಗಿ ಮತ್ತು ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಸಭೆಯಿಂದ ಹೊರಗುಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ನಿತೀಶಕುಮಾರ ಅವರನ್ನು ಮುಖ್ಯ ಸಂಚಾಲಕರನ್ನಾಗಿ ನೇಮಿಸುವ ನಿರ್ಧಾರವನ್ನು ವಿರೋಧಿಸಿದರು, ಇದು ಮೈತ್ರಿಕೂಟದ ಸಭೆಗೆ ಅವರು ಬರುವವರೆಗೂ ನಿರ್ಧಾರವನ್ನು ತೆಗೆದುಕೊಳ್ಳದಿರಲು ಕಾರಣವಾಯಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಮತ್ತು ಸಭೆಯಲ್ಲಿ ಗೈರುಹಾಜರಾದ ಇತರ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿದ ನಂತರ ಈ ಸ್ಥಾನದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಜೆಡಿ-ಯು ಪ್ರತಿನಿಧಿಗಳು ಮತ್ತು ಪಕ್ಷದ ಅಧ್ಯಕ್ಷ ಲಲ್ಲನ್ ಸಿಂಗ್ ಕೂಡ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ. ಕೇವಲ 16 ಗಂಟೆಗಳ ಮೊದಲು ತಿಳಿಸುವ ಬದಲು ಹೆಚ್ಚು ಮುಂಚಿತವಾಗಿ ತಿಳಿಸಬೇಕು ಎಂದು ಹೇಳಿರುವ ಬ್ಯಾನರ್ಜಿ ಅವರು ಸಭೆಗೆ ಹಾಜರಾಗಲು ನಿರಾಕರಿಸಿದರು. ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ ಯಾದವ್ ಅವರ ತಂಡವೂ ಹಿಂದಿನ ದಿನ ದೆಹಲಿಗೆ ಪ್ರಯಾಣಿಸಿತ್ತು, ಆದರೆ ಅವರು ಕೂಡ ಸಭೆಯಲ್ಲಿ ಭಾಗವಹಿಸಲಿಲ್ಲ. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ವರ್ಚುವಲ್ ಸಭೆಯಿಂದ ಹೊರಗುಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ, ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವುದು ಮತ್ತು ಇತರ ವಿಷಯಗಳನ್ನು ಪರಿಶೀಲಿಸಲು ಸಭೆ ನಡೆಸಲಾಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ತಮ್ಮ ಭಾರತ ಜೋಡೋ ನ್ಯಾಯ ಯಾತ್ರೆಯನ್ನು ಪ್ರಾರಂಭಿಸುತ್ತಿದ್ದಾರೆ ಮತ್ತು ಇತರ ಎಲ್ಲಾ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಇದಕ್ಕೆ ಕೈಜೋಡಿಸಬೇಕೆಂದು ಮೈತ್ರಿ ಪಾಲುದಾರರಿಗೆ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖರ್ಗೆ ಅವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಮಾಡಿ ಎಂದು ಪ್ರಸ್ತಾಪಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಪ್ರಸ್ತಾವನೆಯನ್ನು ಬೆಂಬಲಿಸಿದ್ದರು. ಆದರೆ ಖರ್ಗೆ ಇದನ್ನು ನಯವಾಗಿಯೇ ತಿರಸ್ಕರಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ