ಪೂರ್ವಜರು ವೇದ ಉಳಿಸಿಕೊಟ್ಟಿದ್ದರಿಂದ ಈವರೆಗೆ ಆಹಾರ ಸಮಸ್ಯೆ ಆಗಲಿಲ್ಲ : ಸ್ವರ್ಣವಲ್ಲೀ ಶ್ರೀಗಳು

ಶಿರಸಿ: ಪೂರ್ವಜರು ವೇದ ಉಳಿಸಿಕೊಟ್ಟಿದ್ದರಿಂದ ಈವರೆಗೆ ಆಹಾರ ಸಮಸ್ಯೆ ಆಗಲಿಲ್ಲ. ವೇದಕ್ಕೂ ಯಜ್ಞಕ್ಕೂ, ಮಳೆಗೂ, ಆಹಾರಕ್ಕೂ ನಿಕಟ ಸಂಬಂಧವಿದೆ. ವೇದ ಮತ್ತು ಯಜ್ಞ ಸಮೃದ್ಧವಾಗಿ ಆಚರಣೆ ಆಗಿದ್ದರೆ ಆಹಾರದಲ್ಲಿಯೂ ಸಮೃದ್ಧಿಯಾಗುತ್ತದೆ. ಹಾಗೂ ಬದುಕಿನಲ್ಲಿ‌ ನೆಮ್ಮದಿ‌ ದೊರೆಯುತ್ತದೆ ಎಂದು ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸ್ವರ್ಣವಲ್ಲೀಯಲ್ಲಿ ಶ್ರೀರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಶನಿವಾರದಿಂದ ಹಮ್ಮಿಕೊಂಡ ಮೂರು ದಿನಗಳ ದಕ್ಷಿಣ ಭಾರತ ಕ್ಷೇತ್ರೀಯ ವೇದ ಸಮ್ಮೇಳನದ‌ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದ ಸಮೃದ್ಧಿಗೆ ವೇದಾಧ್ಯಯನದ ಜೊತೆಗೆ ವೇದಗಳಿಗೆ ಪೂರಕವಾದ ಯಜ್ಞದ ಅನುಷ್ಠಾನ ಹೆಚ್ಚಬೇಕು ಎಂದು ಹೇಳಿದರು.
ಈಚೆಗೆ ವೇದಾಧ್ಯಯನ, ಯಜ್ಞಗಳ ಕೊರತೆಯ ಪರಿಣಾಮ ಕಾಡುತ್ತಿದೆ. ಇದು ಮಳೆಯ ಕೊರತೆಗೂ ಕಾರಣವಾಗುತ್ತಿದೆ. ಇದು ಆಹಾರ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಭೂಮಿ ಕೂಡ ಬರಡಾಗುತ್ತಿದೆ ಎಂದರು.

ವೇದಗಳ ಅಧ್ಯಯನದಿಂದ ಏನು ಮಹತ್ವ ಎನ್ನುವ ಕುರಿತು ಭಗವದ್ಗೀತೆ ಕೂಡ‌ ಹೇಳುತ್ತದೆ. ವೇದ ತಿಳಿದು ಯಜ್ಞ ಮಾಡಬೇಕಾದರೆ ವೇದವನ್ನು ತಿಳಿದು ಮಾಡಬೇಕು. ವೇದಾಧ್ಯಯನ‌ಕ್ಕೆ ಉತ್ತೇಜಿಸುವುದು ಈ ವೇದ ಸಮ್ಮೇಳನದ‌ ಮೂಲ ಆಶಯ. ವೇದ ಶಾಸ್ತ್ರ ಪಂಡಿತರ ಕೊರತೆಯೂ ಇದೆ. ಮಂತ್ರಗಳ ಬಳಕೆ ಜೊತೆಗೆ ಅದರ ಅರ್ಥ ಜ್ಞಾನ ಕೂಡ ಇರಬೇಕು. ವೇದಗಳನ್ನು ಉಳಿಸಲು‌ ಮುಂದಾದರೆ ಪರಂಪರೆಯ ಸಂರಕ್ಷಣೆ ಆಗುತ್ತದೆ ಎಂದರು.
ಕೂಡಲಿ‌ಮಠದ ಶ್ರೀ ಅಭಿನವಶಂಕರ ಭಾರತೀ ಸ್ವಾಮೀಜಿ ಮಾತನಾಡಿ, ಧರ್ಮದ ಆಚರಣೆಗೆ ಸಮಾಜದ ಕೊಡು‌ಕೊಳ್ಳುವಿಕೆ ಆಗಬೇಕಿದೆ ಎಂದರು.

ಉಜ್ಜಯನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ಪ್ರಫುಲಕುಮಾರ ಮಿಶ್ರ ಮಾತನಾಡಿ, ವಿದೇಶ ಸಂಸ್ಕೃತಿಯ ಪ್ರಭಾವದಿಂದ ವೇದ ಅಧ್ಯಯನಕ್ಕೆ ತೊಂದರೆಯಾದರೂ ಆಚಾರ್ಯರ ಪ್ರಭಾವದಿಂದ, ಮಠ ಮಂದಿರಗಳಿಂದ, ಸರ್ಕಾರದ ಸ್ಪಂದನೆಯಿಂದ ಉಳಿಸುವ ಅದನ್ನು ಕಾರ್ಯ ಮಾಡಲಾಗಿದೆ. ವೇದಗಳ ರಕ್ಷಣೆ ಎಲ್ಲರ ಜವಬ್ದಾರಿ‌ ಎಂದರು.
ಉಜ್ಜಯನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ ಕಾರ್ಯದರ್ಶಿ ಪ್ರೊ. ವಿರೂಪಾಕ್ಷ‌ ಜಡ್ಡಿಪಾಲ ಮಾತನಾಡಿ,‌ ವೇದ ಶಾಸ್ತ್ರಗಳಿಗೆ ಬಲ‌ ಕೊಡುವುದೇ ಪ್ರತಿಷ್ಠಾನದ ಆಶಯ ಹಾಗೂ ಉದ್ದೇಶ. ಮಣಿಪುರದಲ್ಲೂ, ಭೂಕಂಪದ ಅನೇಕ‌ ಸ್ಥಳದಲ್ಲಿಯೂ, ಗೋವಾದಲ್ಲೂ ವೇದ ಅಧ್ಯಯನ ಮಾಡಿಸುತ್ತಿದ್ದೇವೆ. ಸರ್ಕಾರಿ ವ್ಯವಸ್ಥೆ ಇಟ್ಟುಕೊಂಡು ವೇದ ಅಧ್ಯಯನ ಮಾಡಿಸುತ್ತಿದ್ದೇವೆ. ಸಣ್ಣ ಸಣ್ಣ ವೇದಾಧ್ಯಯನ ಕೇಂದ್ರಗಳಿಗೂ ಸರ್ಕಾರದಿಂದ‌ ಮಾನ್ಯತೆ ಸಿಗುವಂತಾಗಬೇಕು. ಹಾಗೂ ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ದಿಕ್ಸೂಚಿ ಭಾಷಣ‌ ಮಾಡಿದ ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ‌ ಕುಲಪತಿ ಪ್ರೊ.ಕಾ.ಈ.ದೇವನಾಥನ್ ಅವರು, ವೇದಾಧ್ಯಯನ, ಶಾಸ್ತ್ರ ಅಧ್ಯಯನ ಎರಡೂ‌ ಮಾಡಬೇಕು. ವೇದ ಅಧ್ಯಯನ ‌ಮಾಡುವವರ ಕೊರತೆ ಇದೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದ ಎಲ್ಲವನ್ನೂ ಓದಬೇಕು. ನಾಲ್ಕೂ ವೇದಗಳ ಅಧ್ಯಯನ ಒಂದೇ ಕಡೆಗೆ ಆಸಕ್ತ ಅಧ್ಯಯನಾರ್ಥಿಗಳಿಗೆ ಸಿಗುವಂತಾಗಬೇಕು ಎಂದರು. ವೇದ ಓದಿದವರಿಗೆ ಪಿಯುಸಿ ತತ್ಸಮಾನ ಪ್ರಮಾಣ‌ ಪತ್ರ ನೀಡಲಾಗುತ್ತದೆ. ಮೋದಿ ಸರ್ಕಾರ ಬಂದ ನಂತರ ಇಂಥದ್ದೊಂದು ನಿರ್ಣಯ ಕೈಗೊಂಡಿದ್ದು ಸ್ವಾಗತಾರ್ಹ.
ಧಾತ್ರೀ ಫೌಂಡೇಶನ್ ನ ಶ್ರೀನಿವಾಸ ಧಾತ್ರಿ‌ ಮಾತನಾಡಿದರು. ಎಂ.ಜಿ.ಗಡಿಮನೆ ಸ್ವಾಗತ ಮಾಡಿದರು. ಜಿ.ವಿ.ಹೆಗಡೆ, ಶಿವರಾಮ ಭಟ್ಟ‌ ಫಲ‌ ಸಮರ್ಪಣೆ‌ ಮಾಡಿದರು. ಇದೇ‌ ವೇಳೆ ಬೆಂಗಳೂರಿನ ವೇ.ಬ್ರ.ಎಸ್.ಗಣೇಶ ಘನಪಾಠಿ, ವಿಜಯವಾಡದ ವೇ.ಬ್ರ.ಸುಂದರಾಮ ಶ್ರೌತಿ ಅವರನ್ನು ಗೌರವಿಸಲಾಯಿತು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ವೇದ ಶೋಭಾ ಯಾತ್ರೆ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವೇದ ಸಮ್ಮೇಳನದ ಭಾಗವಾಗಿ ಶಿರಸಿ ನಗರದಲ್ಲಿ ಶನಿವಾರ ಸಂಜೆ ವೇದ ಶೋಭಾ ಯಾತ್ರೆ ನಡೆಯಿತು.
ನಗರದ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಪ್ರಾರಂಭವಾದ ಶೋಭಾ ಯಾತ್ರೆ ಯೋಗ ಮಂದಿರದ ಬಳಿ ಸಮಾಪನಗೊಂಡಿತು. ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳವರು ಸಂದೇಶ ನೀಡಿ, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ವೇದಗಳಿಗೆ ಬಹಳ ಮಹತ್ವದ ಸ್ಥಾನವಿದೆ.ಪ್ರತಿಯೊಬ್ಬರೂ ವೇದಗಳ ಸಾರದ ಸಂದೇಶವನ್ನು ಅರ್ಥೈಸಿಕೊಳ್ಳಬೇಕು. ವೇದಗಳಿಂದ ಸಮಾಜಕ್ಕೆ, ದೇಶಕ್ಕೆ ಹಿತವಾಗುತ್ತದೆ ಎಂದರು. ಕೂಡಲಿಯ ಶೃಂಗೇರಿ ಮಠ ಮತ್ತು ನೆಲೆಮಾವು ಮಠದ ಯತಿಗಳು ಪಾಲ್ಗೊಂಡಿದ್ದರು.

ಸೋಮವಾರ ಸಮಾರೋಪ
ಮೂರು ದಿನಗಳ ಕ್ಷೇತ್ರೀಯ ವೇದ ಸಮ್ಮೇಳನ ಸೋಮವಾರ ಸಂಪನ್ನವಾಗಲಿದೆ. ಸ್ವರ್ಣವಲ್ಲೀ ಶ್ರೀಗಳು, ಕೂಡಲಿ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಅನಂತ ಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಳ್ಳಳಿದ್ದಾರೆ. ಇದೇ ವೇಳೇ ಬೆಂಗಳೂರಿನ ವೇ.ಬ್ರ. ಕೆ.ಗೋವಿಂದ ಪ್ರಕಾಶ ಘನಪಾಠಿ, ಪುರಿಯ ವೇ.ಬ್ರ. ಕುಂಜಬಿಹಾರೀ ಉಪಾಧ್ಯಾಯ ಅವರನ್ನು ಸಮ್ಮಾನಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement