ಕಾಂಗ್ರೆಸ್‌ ತೊರೆಯುತ್ತಿರುವ ರಾಹುಲ್ ಗಾಂಧಿ ತಂಡದ ನಾಯಕರು : 2019ರಿಂದ ಕಾಂಗ್ರೆಸ್ ತೊರೆದ ಪ್ರಮುಖ ನಾಯಕರು ಇವರು…

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಭಾರತ ಜೋಡಿ ನ್ಯಾಯ ಯಾತ್ರೆಗೆ ಮುಂಚಿತವಾಗಿ ಇಂದು, ಭಾನುವಾರ ದೊಡ್ಡ ಆಘಾತವನ್ನು ಅನುಭವಿಸಿದೆ.
ಪಕ್ಷದ ಮಹಾರಾಷ್ಟ್ರದ ವರ್ಚಸ್ವಿ ನಾಯಕ ಮಿಲಿಂದ್ ದಿಯೋರಾ ಅವರು ರಾಜೀನಾಮೆ ನೀಡಿದ್ದು, ಇದು ಪಕ್ಷದೊಂದಿಗಿನ ತಮ್ಮ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದೆ ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ದಿಯೋರಾ ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುತ್ತಾರೆ ಎಂಬ ಊಹಾಪೋಹದ ಜೊತೆಗೆ, “ಯುವ ನಾಯಕರ” ವಿಷಯಕ್ಕೆ ಬಂದಾಗ ಕಾಂಗ್ರೆಸ್ ಸಚಿನ್ ಪೈಲಟ್ ಹೊರತು ಪಡಿಸಿ ಬಹುತೇಕ ಎಲ್ಲ ಯುವ ಪ್ರಭಾವಿ ನಾಯಕರು ಕಾಂಗ್ರೆಸ್‌ ತೊರೆದಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ಹೊರಹೋದ ಕೆಲವು ಪ್ರಭಾವಶಾಲಿ ನಾಯಕರ ಪಟ್ಟಿ ಇಲ್ಲಿದೆ:

ಮಿಲಿಂದ್ ದಿಯೋರಾ
ಕಾಂಗ್ರೆಸ್ ಹಿರಿಯ ನಾಯಕ ಮುರಳಿ ದಿಯೋರಾ ಅವರ ಪುತ್ರ, ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಭಾನುವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವ ನಿರೀಕ್ಷೆಯಿದೆ. ವಿಪಕ್ಷಗಳ ಮೈತ್ರಿಕೂಟದ ಭಾಗವಾಗಿರುವ ಉದ್ಧವ್ ಠಾಕ್ರೆ ಬಣ ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಸೀಟು ನೀಡಬೇಕೆಂದು ಪಟ್ಟಿ ಹಿಡಿದಿದ್ದರ ಬಗ್ಗೆ ಮಿಲಿಂದ್‌ ದಿಯೋರಾ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಪಿಲ್ ಸಿಬಲ್
ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ಮೇ 16, 2022 ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು, ಒಂದು ವಾರದ ನಂತರ ಸಮಾಜವಾದಿ ಪಕ್ಷದ ಬೆಂಬಲ ಪಡೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯಸಭೆಗೆ ಆಯ್ಕೆಯಾದರು. ಕಾಂಗ್ರೆಸ್‌ನ ಭಿನ್ನಮತೀಯ ಗುಂಪು ಜಿ-23ರಲ್ಲಿದ್ದ ಅವರು ನಂತರ ಪಕ್ಷ ತೊರೆಯಬೇಕಾಯಿತು. ಕಪಿಲ್‌ ಸಿಬಲ್‌ ಅವರು ತಮ್ಮ ರಾಜೀನಾಮೆ ದಿಢೀರ್‌ ನಿರ್ಧಾರ ಅಲ್ಲ ಹಾಗೂ ಮತ್ತು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದ್ದರು.

ಗುಲಾಂ ನಬಿ ಆಜಾದ್
ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ರಾಜೀನಾಮೆ 2022 ರಲ್ಲಿ ಪಕ್ಷವು ಅನುಭವಿಸಿದ ಅತಿದೊಡ್ಡ ಆಘಾತದಲ್ಲಿ ಒಂದು. G-23 ಭಿನ್ನಮತೀಯ ಗುಂಪಿನ ಪ್ರಮುಖ ನಾಯಕರಾಗಿದ್ದ ಅವರು ಅವಿಭಜಿತ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದಲ್ಲಿ ಸಚಿವರಾಗಿ ಹಲವು ವರ್ಷಗಳ ಕಾಲ ನಿರ್ವಹಿಸಿದ್ದರು. ಪಕ್ಷದಲ್ಲಿ “ಅಪ್ರಬುದ್ಧತೆ” ಗಾಗಿ ರಾಹುಲ್ ಗಾಂಧಿಯನ್ನು ಟೀಕಿಸಿದ್ದರು. ಅವರು ಈಗ ತಮ್ಮ ಪ್ರಾದೇಶಿಕ ಪಕ್ಷವಾದ ಜಮ್ಮು-ಕಾಶ್ಮೀರ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ ಸ್ಥಾಪಿಸಿದ್ದಾರೆ.

ಹಾರ್ದಿಕ್ ಪಟೇಲ್
ಗುಜರಾತಿನ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಮೇ 2022 ರಲ್ಲಿ ಕಾಂಗ್ರೆಸ್ ತೊರೆದರು, 2019 ರಲ್ಲಿ ಅವರನ್ನು ಪಕ್ಷಕ್ಕೆ ಕರೆತಂದ ರಾಹುಲ್ ಗಾಂಧಿಯವರಿಗೇ ಅವರು ರಾಜೀನಾಮೆ ಪತ್ರವನ್ನು ನೀಡಿದರು. ಗುಜರಾತ್‌ನಲ್ಲಿ 2015 ರ ಪಾಟಿದಾರ್ ಮೀಸಲಾತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ 30 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಅವರನ್ನು ಗುಜರಾತಿನ ರಾಜಕೀಯದ “ಭವಿಷ್ಯ” ಎಂದು ಕೆಲವರು ಬಿಂಬಿಸಿದ್ದರು. ಆದರೆ, ಪ್ರತಿಭಟನೆಯ ನಂತರ, ಅವರು ಮತ್ತೆ ದೊಡ್ಡ ಪ್ರಮಾಣದ ಪ್ರತಿಭಟನೆಗೆ ಬೃಹತ್ ಜನಸಮೂಹ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ನಂತರ ರಾಜಕೀಯದಲ್ಲಿ ಒಬ್ಬಂಟಿಯಾದರು. ಹೀಗಾಗಿ ಅವರು ಕಳೆದ ಲೋಕಸಭೆ ಚುನಾವಣೆಗೆ ಮುಂಚಿತವಾಗಿ 2019 ರಲ್ಲಿ ಕಾಂಗ್ರೆಸ್‌ಗೆ ಸೇರಿದರು ಆದರೆ ಗುಜರಾತ್‌ನ ಎಲ್ಲಾ ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರಿಂದ ಕಾಂಗ್ರೆಸ್‌ ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ವಿಫಲರಾದರು. ನಂತರ ಅವರು ಜೂನ್ 2022 ರಲ್ಲಿ ಬಿಜೆಪಿ ಸೇರಿದರು.

ಪ್ರಮುಖ ಸುದ್ದಿ :-   ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

ಅಶ್ವನಿ ಕುಮಾರ
ಮಾಜಿ ಕೇಂದ್ರ ಸಚಿವ ಅಶ್ವನಿಕುಮಾರ ಅವರು ಪಂಜಾಬ್ ಚುನಾವಣೆಗೆ ಕೆಲವೇ ದಿನಗಳ ಮೊದಲು ಫೆಬ್ರವರಿ 2022 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. ಪಕ್ಷದ ಅನುಭವಿ, ಅವರು 2019 ರ ಚುನಾವಣೆಯಲ್ಲಿ ಸೋತ ನಂತರ ಪಕ್ಷವನ್ನು ತೊರೆದ ಮೊದಲ ಹಾಗೂ ಹಿರಿಯ ಮಾಜಿ ಕೇಂದ್ರ ಸಚಿವರಾಗಿದ್ದಾರೆ. ಟಿವಿ ಚರ್ಚೆಗಳಲ್ಲಿ ಕಾಂಗ್ರೆಸ್‌ ಅನ್ನು ಪ್ರತಿನಿಧಿಸುತ್ತಿದ್ದ ಅವರು ಅತ್ಯುತ್ತಮ ವಾಕ್ಪಟುವಾಗಿದ್ದರು. ಹಾಗೂ ಕಾಂಗ್ರೆಸ್ಸಿನ ಥಿಂಕ್‌ ಟ್ಯಾಂಕ್‌ಗಳಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದರು. ಆದರೆ ಪಕ್ಷದಿಂದ ಅವರು ಹೊರಬರಬೇಕಾಯಿತು.

ಸುನಿಲ್ ಜಾಖಡ್‌
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಸುನಿಲ ಜಾಖಡ್‌ ಅವರು 2022 ರಲ್ಲಿ ಆಗಿನ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ನಾಯಕತ್ವವನ್ನು ಟೀಕಿಸಿದ್ದು ಅವರು ಪಕ್ಷವನ್ನು ತೊರೆಯಲು ಕಾರಣವಾಯಿತು. ಅವರು ಮೇ ತಿಂಗಳಲ್ಲಿ ಬಿಜೆಪಿ ಸೇರಿದರು ಮತ್ತು ಅದೇ ವರ್ಷ ಜುಲೈನಲ್ಲಿ ಪಂಜಾಬ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿಜೆಪಿ ಅವರನ್ನು ನೇಮಕ ಮಾಡಿತು. ಅವರು ಉತ್ತಮ ಸಂಘಟನೆ ನಿರ್ವಹಣೆಗೆ ಹೆಸರುವಾಸಿಯಾಗಿದ್ದರು.  .

 

ಆರ್.ಪಿ.ಎನ್.ಸಿಂಗ್

ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್ ಅವರು ಕಾಂಗ್ರೆಸ್ ತೊರೆದು 2022 ರ ಜನವರಿಯಲ್ಲಿ ಬಿಜೆಪಿಗೆ ಸೇರಿದರು, ಉತ್ತರ ಪ್ರದೇಶ ಚುನಾವಣೆಗೆ ಮುಂಚೆಯೇ ಹಾಗೆ ಮಾಡಿದ ಪ್ರಮುಖ ನಾಯಕರಾದರು. ಪ್ರಮುಖ ಹಿಂದುಳಿದ ಜಾತಿ ನಾಯಕರಾದ ಆರ್‌ಪಿಎನ್ ಸಿಂಗ್ ಅವರು ಪ್ರಿಯಾಂಕಾ ಗಾಂಧಿ ನೇತೃತ್ವದ ಉತ್ತರ ಪ್ರದೇಶದ ಪ್ರಚಾರದಲ್ಲಿ ತಮ್ಮನ್ನು ಕಡೆಗಣಿಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿದೆ. ಕಾಂಗ್ರೆಸ್ಸಿನ ಯುವ ನೇತಾರರಲ್ಲಿ ಒಬ್ಬರಾಗಿದ್ದ ಹಾಗೂ ಉತ್ತಮ ವಾಗ್ಮಿಯಾಗಿದ್ದ ಅವರು ಬಿಜೆಪಿಗೆ ಸೇರಿದರು.

ಜ್ಯೋತಿರಾದಿತ್ಯ ಸಿಂಧಿಯಾ
ಈಗ ಕೇಂದ್ರ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು 2020 ರಲ್ಲಿ ಬಿಜೆಪಿ ಸೇರಿದರು, ಅವರು ಹಾಗೂ ಅವರ ಬೆಂಬಲಿ ಶಾಸಕರ ಸಾಮೂಹಿಕ ಪಕ್ಷಾಂತರದಾಗಿ ಕಮಲನಾಥ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪತನವಾಯಿತು ಮತ್ತು ಮಧ್ಯಪ್ರದೇಶದಲ್ಲಿ ಶಿವರಾಜ ಸಿಂಗ್ ಚೌಹಾಣ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಇದು ಕಾರಣವಾಯಿತು. ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾಜಿ ಕೇಂದ್ರ ಸಚಿವ ಮಾಧವರಾವ್ ಸಿಂಧಿಯಾ ಅವರ ಪುತ್ರ.

ಅಮರಿಂದರ ಸಿಂಗ್
ಅಮರಿಂದರ್ ಸಿಂಗ್ ಅವರು ಸೆಪ್ಟೆಂಬರ್ 2021 ರಲ್ಲಿ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು, ರಾಜ್ಯ ಚುನಾವಣೆಗೆ ತಿಂಗಳುಗಳ ಮೊದಲು, ಅವರು “ತಾನು ಮೂರು ಬಾರಿ ಅವಮಾನಕ್ಕೊಳಗಾಗಿದ್ದೇನೆ” ಮತ್ತು “ಅವರು ನಂಬುವವರನ್ನು ನೇಮಿಸಲು” ಕಾಂಗ್ರೆಸ್ ಹೈಕಮಾಂಡ್‌ ಮುಕ್ತವಾಗಿದೆ ಎಂದು ಹೇಳಿದರು. ಕಾಂಗ್ರೆಸ್ಸಿನಿಂದ ಹೊರಬಂದ ನಂತರ ಅವರು ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದರು. ಪಂಜಾಬ್ ಚುನಾವಣೆಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. 2022 ರಲ್ಲಿ, ಕಾಂಗ್ರೆಸ್ ತೊರೆದ ಸುಮಾರು ಒಂದು ವರ್ಷದ ನಂತರ, ಅವರು ಬಿಜೆಪಿ ಸೇರಿದರು ಮತ್ತು ಅದರೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

ಜಿತಿನ್ ಪ್ರಸಾದ
ಒಂದು ಕಾಲದಲ್ಲಿ ರಾಹುಲ್ ಗಾಂಧಿಯ ನಿಕಟವರ್ತಿಯಾಗಿದ್ದ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಉತ್ತರ ಪ್ರದೇಶ ಚುನಾವಣೆಗೆ ಒಂದು ವರ್ಷ ಮೊದಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ 2021 ರಲ್ಲಿ ಬಿಜೆಪಿಗೆ ಸೇರಿದರು. ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಪ್ರಮುಖ ಬ್ರಾಹ್ಮಣ ಸಮುದಾಯದ ನಾಯಕರಾಗಿದ್ದರು. “ಬಿಜೆಪಿ ಮಾತ್ರ ನಿಜವಾದ ರಾಜಕೀಯ ಪಕ್ಷ. ಇದು ಏಕೈಕ ರಾಷ್ಟ್ರೀಯ ಪಕ್ಷ. ಉಳಿದವು ಪ್ರಾದೇಶಿಕ” ಎಂದು ಅವರು ಕಾಂಗ್ರಸ್ಸಿಗೆ ರಾಜೀನಾಮೆ ನೀಡಿದ ವೇಳೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

 

ಅಲ್ಪೇಶ ಠಾಕೂರ್
ಮಾಜಿ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಅವರು ಎರಡು ರಾಜ್ಯಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ ನಂತರ ಜುಲೈ 2019 ರಲ್ಲಿ ಪಕ್ಷವನ್ನು ತೊರೆದರು. ಅವರು ಕೆಲವು ದಿನಗಳ ನಂತರ ಬಿಜೆಪಿ ಸೇರಿದರು ಮತ್ತು ರಾಧಾಪುರದಿಂದ ಉಪಚುನಾವಣೆಗೆ ಸ್ಪರ್ಧಿಸಿದರು, ಆದರೆ ಸ್ಥಾನವನ್ನು ಕಳೆದುಕೊಂಡರು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಗಾಂಧಿನಗರ ದಕ್ಷಿಣದಿಂದ ಗೆದ್ದರು.

ಅನಿಲ ಆಂಟೋನಿ
ಕಾಂಗ್ರೆಸ್ ಹಿರಿಯ ನಾಯಕ ಎ.ಕೆ. ಆಂಟನಿ ಅವರ ಪುತ್ರ ಅನಿಲ ಆಂಟೋನಿ ಕಳೆದ ವರ್ಷ ಜನವರಿಯಲ್ಲಿ ಪಕ್ಷವನ್ನು ತೊರೆದರು. ಒಂದು ತಿಂಗಳಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು, ಬಿಬಿಸಿ ಸುದ್ದಿವಾಹಿನಿಯ ಗುಜರಾತ್‌ ಗಲಭೆ ಕುರಿತಾದ ಮೋದಿ ಸಾಕ್ಷ್ಯ ಚಿತ್ರದ ಬಗ್ಗೆ ಅವರು ಬಿಬಿಸಿ ಮೇಲೆ ಹರಿಹಾಯ್ದರು ಮತ್ತು ಪಕ್ಷದ ನಿಲುವಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡರು. ಇದು ಕಾಂಗ್ರೆಸ್‌ನಿಂದ ಅವರು ನಿರ್ಗಮಿಸಲು ಕಾರಣವಾಯಿತು. ಭಾರತವನ್ನು ಪ್ರಮುಖ ಸ್ಥಾನದಲ್ಲಿ ಇರಿಸುವ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು. ಮಾಜಿ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಅವರು ತಮ್ಮ ಪುತ್ರನ ನಿರ್ಧಾರಕ್ಕೆ ಬೇಸರ ಹಾಗೂ ನಿರಾಸೆಯನ್ನು ವ್ಯಕ್ತಪಡಿಸಿದ್ದರು.

ಜೈವೀರ್‌ ಶೇರ್ಗಿಲ್‌
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಎರಡು ದಿನಗಳ ನಂತರ, ಮತ್ತೊಬ್ಬ ನಾಯಕ ಜೈವೀರ್ ಶೆರ್ಗಿಲ್ ಅವರು ಆಗಸ್ಟ್ 2022 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. ಅದರ ಕಿರಿಯ ವಕ್ತಾರರಲ್ಲಿ ಒಬ್ಬರಾಗಿದ್ದ 40 ವರ್ಷ ವಯಸ್ಸಿನ ಜೈವೀರ್‌ ಶೇರ್ಗಿಲ್‌ ಅವರು ಡಿಸೆಂಬರ್ 2022 ರಲ್ಲಿ ಬಿಜೆಪಿ ಸೇರಿದರು ಮತ್ತು ಅದರ ರಾಷ್ಟ್ರೀಯ ವಕ್ತಾರರಾದರು. ಕೇಸರಿ ಪಕ್ಷದಲ್ಲಿನ ವೃತ್ತಿಪರತೆಯನ್ನು ಅವರು ಶ್ಲಾಘಿಸಿದ್ದಾರೆ, ಇದು ಕಾಂಗ್ರೆಸ್‌ ಪಕ್ಷದಲ್ಲಿನ “ಊಳಿಗಮಾನ್ಯ ಹೈಕಮಾಂಡ್” ಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎಂದು ಅವರು ಹೇಳಿದರು.

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement