ವೀಡಿಯೊ…| ನಾನು ನಾಸ್ತಿಕನಲ್ಲ-ಆಸ್ತಿಕ ; ʼಜೈ ಶ್ರೀರಾಮʼ ಘೋಷಣೆ ಕೂಗಿದ ಸಿದ್ದರಾಮಯ್ಯ

ಬೆಂಗಳೂರು: ನಾನು ನಾಸ್ತಿಕನಲ್ಲ, ನಾನು ಆಸ್ತಿಕ. ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿಗಳಿವೆ. ಪ್ರತಿಯೊಬ್ಬರೂ ಅವರವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತಾರೆ, ಗುಡಿ ಕಟ್ಟುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜೈ ಶ್ರೀರಾಮ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ. ಅದು ಪ್ರತಿಯೊಬ್ಬ ಭಕ್ತರ ಸ್ವತ್ತು ಎಂದು ಹೇಳಿದ ಅವರು, ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು ಹಾಗೂ ಸೇರಿದ್ದ ಜನರಿಗೂ ಘೋಷಣೆ ಕೂಗಿಸಿದರು.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ದಿನವಾದ ಸೋಮವಾರ (ಜನವರಿ ೨೨) ಬೆಂಗಳೂರಿನ ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ಸಕುಟುಂಬ ಸಮೇತನಾಗಿರುವ ರಾಮ,ಸೀತೆ, ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವ ಧರ್ಮವೂ ದ್ವೇಷವನ್ನು ಹೇಳುವುದಿಲ್ಲ. ಶ್ರೀರಾಮ ಸಮಾಜಮುಖಿ ಆಗಿದ್ದ. ಒಬ್ಬ ಮಡಿವಾಳನ ಮಾತಿಗೂ ಬೆಲೆ ಕೊಟ್ಟಂತಹ ಮಹಾನ್‌ ವ್ಯಕ್ತಿ. ಪಿತೃವಾಕ್ಯ ಪರಿಪಾಲನೆಗೆ ವನವಾಸಕ್ಕೆ ಹೋದಂತಹ ವ್ಯಕ್ತಿ ಎಂದು ಬಣ್ಣಿಸಿದ ಸಿದ್ದರಾಮಯ್ಯ, ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇವರೆಲ್ಲ ಸಕುಟುಂಬಸ್ಥರು ಎಂದು ಹೇಳಿದರು.
ಅಧರ್ಮ-ಅಮಾನವೀಯ ಕೆಲಸ ಮಾಡಿ ನಾಟಕೀಯವಾಗಿ ಪೂಜೆ ಮಾಡಿದರೆ ಆ ಪೂಜೆಯನ್ನು ದೇವರು ಒಪ್ಪಿಕೊಳ್ಳಲ್ಲ. ಸಕಲ ಜೀವಗಳೂ ಸಮಾನತೆ, ಪ್ರೀತಿಯಿಂದ ಬಾಳಬೇಕು ಎನ್ನುವುದೇ ಶ್ರೀರಾಮನ ಆದರ್ಶದ ಆಶಯ ಎಂದು ಹೇಳಿದರು.

ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಆಶಯ ಶ್ರೀರಾಮನ ಆದರ್ಶ ಮತ್ತು ವ್ಯಕ್ತಿತ್ವದಲ್ಲಿದೆ. ಮನುಷ್ಯ ಮನುಷ್ಯನನ್ನು ದ್ವೇಷಿಸಬಾರದು ಎನ್ನುವುದೇ ರಾಮಾಯಣ, ಮಹಾಭಾರತದ ಸಂದೇಶ. ಪರಿಶಿಷ್ಠ ಪಂಗಡ ಸಮುದಾಯದ ವಾಲ್ಮೀಕಿ ಅವರು ರಾಮಾಯಣವನ್ನು ವಿಶ್ವಕ್ಕೇ ಕೊಟ್ಟರು. ದೇವರು ನಮ್ಮ ಆತ್ಮ ಮತ್ತು ಶರೀರದಲ್ಲೇ ಇದ್ದಾನೆ ಎಂದು ಬಸವಣ್ಣನವರು ನುಡಿದರು ಎಂದು ಹೇಳಿದರು.
ಸಚಿವರಾದ ಬೈರತಿ ಸುರೇಶ್, ಈಶ್ವರ್ ಖಂಡ್ರೆ, ಆಯೋಗದ ಉಪಾಧ್ಯಕ್ಷರಾದ ರಾಜೀವ್‌ ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಅರವಿಂದ ಲಿಂಬಾವಳಿ ಮೊದಲಾದವರಿ ಇದ್ದರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement