ವೀಡಿಯೊ..| ವೇದಘೋಷ-ಮಂಗಳವಾದ್ಯಗಳ ನಡುವೆ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ, ಅಯೋಧ್ಯೆ ರಾಮಮಂದಿರ ಉದ್ಘಾಟನೆ

ಅಯೋಧ್ಯೆ: 5 ಶತಮಾನಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಮುಕ್ತಾಯವಾಗಿದ್ದು, ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ.
ಸುಮಾರು ಐದುನೂರು ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ ಕನಸು ನನಸಾಗಿದೆ. ಪ್ರಧಾನಿ ಮೋದಿ ಅವರು ಅಭಿಜಿತ್ ಲಗ್ನದಲ್ಲಿ ಪೂಜಾ ವಿಧಿ ವಿಧಾನ ನಡೆಸಿದರು. ದೇಶ, ವಿದೇಶಗಳಲ್ಲಿ ಈ ಸುಂದರ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿತು. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದೆ.
ವಿಶೇಷ ಹೆಲಿಕಾಪ್ಟರ್‌ನಲ್ಲಿ ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿಯ ಛತ್ರಿ ಹಿಡಿದುಕೊಂಡು ರಾಮಮಂದಿರ ಪ್ರವೇಶಿಸಿದರು. ನಂತರ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು, ಗರ್ಭಗುಡಿಯಲ್ಲಿ ಭಗವಾನ್‌ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದರು.

ಮಧ್ಯಾಹ್ನ 12 ಗಂಟೆಗೆ ವೇದಮಂತ್ರ, ಮಂಗಳ ವಾದ್ಯಗಳ ನಡುವೆ ಪ್ರಾಣಪ್ರತಿಷ್ಠಾ ವಿಧಿವಿಧಾನ ಆರಂಭಗೊಂಡಿತು. ಸ್ವಾಮಿಗೆ ರೇಷ್ಮೆ ವಸ್ತ್ರ ಮತ್ತು ಬೆಳ್ಳಿಯ ಛತ್ರವನ್ನು ಪ್ರಧಾನಿ ಮೋದಿ ಅರ್ಪಿಸಿದರು. 12:29ಕ್ಕೆ ಅಭಿಜಿತ್ ಲಗ್ನದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಮಹೋತ್ಸವ ಜರುಗಿತು. ಪ್ರಧಾನಿಯವರು ಬಾಲರಾಮನಿಗೆ ಮೊದಲ ಆರತಿಯನ್ನು ಮಾಡಿದರು. ಪ್ರಾಣ ಪ್ರತಿಷ್ಠೆಯ ವೇಳೆ ಆಕಾಶದಿಂದ ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಬಾಲರಾಮನು ಎಡಗೈಯಲ್ಲಿ ಧನುಸ್ಸನ್ನು ಮತ್ತು ಬಲಗೈಯಲ್ಲಿ ಬಾಣವನ್ನು ಹಿಡಿದಿದ್ದು, ಚಿನ್ನದ ಆಭರಣಗಳನ್ನು ಧರಿಸಿ ನಗುತ್ತಿರುವಂತೆ ಕಾಣುತ್ತಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹಾಗೂ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್‌ ಅವರು ಪಾಲ್ಗೊಂಡಿದ್ದರು.

2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪಿನಂತೆ ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸಿದ ನಂತರ, ಲೋಕಾರ್ಪಣೆ ಮಾಡಲಾಯಿತು. ಸಾವಿರಾರು ಜನರ ಹೋರಾಟ, ಪ್ರಾಣ ತ್ಯಾಗ ಹಾಗೂ ಸುದೀರ್ಘ ಕಾನೂನು ಹೋರಾಟದ ಬಳಿಕ ರಾಮಮಂದಿರದ ಕನಸು ಸಾಕಾರಗೊಂಡಿದೆ. ಈಗ ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು, ಮುಂದಿನ ದಿನಗಳಲ್ಲಿ ರಾಮರಾಜ್ಯದ ಕನಸು ಕೂಡ ನನಸಾಗಲಿದ ಎಂಬುದು ದೇಶದ ಜನರ ಆಶಯವಾಗಿದೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement