ಕಾಯಿಲೆ ಗುಣವಾಗುತ್ತದೆಂದು ಬಾಲಕನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ಪೋಷಕರು..: ಆದ್ರೆ ಬಾಲಕನ ಪ್ರಾಣವೇ ಹೋಯ್ತು…

ಡೆಹ್ರಾಡೂನ್: ಕುಟುಂಬದ ಮೂಢನಂಬಿಕೆ ಮತ್ತು ಪವಾಡದ ಮೇಲಿನ ಅಂಧಶ್ರದ್ಧೆಯು ಐದು ವರ್ಷದ ಬಾಲಕನ ಸಾವಿಗೆ ಕಾರಣವಾದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಐದು ವರ್ಷದ ಬಾಲಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗಂಗಾ ನದಿ ನೀರು ಗುಣಪಡಿಸುತ್ತದೆ ಎಂದು ಆತನ ಹೆತ್ತವರು ನಂಬಿದ್ದರು. ಗಂಗಾನದಿ ನೀರಿನಲ್ಲಿ ಮುಳುಗಿದರೆ ಆತನ ಕಾಯಿಲೆ ಕಡಿಮೆಯಾಗುತ್ತದೆ ಎಂಬ ಮೂಡನಂಬಿಕೆಯಲ್ಲಿ ಉತ್ತರ ಭಾರತದ ಭಯಂಕರ ಚಳಿಗಾಲದಲ್ಲಿ, ಹುಡುಗನನ್ನು ಕೊರೆಯುವ ಚಳಿಯ ಹೆಪ್ಪುಗಟ್ಟಿದ ನದಿ ನೀರಿನಲ್ಲಿ ಮುಳುಗಿಸಿದ್ದಾರೆ. ಆದರೆ ಆತನ ಜೀವಿತಾವಧಿ ಹೆಚ್ಚಿಸುವ ಪ್ರಯತ್ನಗಳು ಆತನ ಸಾವಿನಲ್ಲಿ ಕೊನೆಗೊಂಡಿತು ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿಯಲ್ಲಿ ನೆಲೆಸಿದ್ದ ಕುಟುಂಬ ಬುಧವಾರ (ಜನವರಿ 24) ಬೆಳಗ್ಗೆ 9 ಗಂಟೆ ಸುಮಾರಿಗೆ ಹರಿದ್ವಾರಕ್ಕೆ ತೆರಳಿದೆ. ಮಗುವಿನೊಂದಿಗೆ ಆತನ ತಂದೆ-ತಾಯಿ ಹಾಗೂ ಇನ್ನೊಬ್ಬ ಸಂಬಂಧಿಕ ಮಹಿಳೆ ಇದ್ದರು ಎಂದು ಕ್ಯಾಬ್ ಚಾಲಕ ಹೇಳಿದರು. ಕ್ಯಾಬ್ ಡ್ರೈವರ್ ಹೇಳುವಂತೆ ಹುಡುಗನಿಗೆ ತುಂಬಾ ಅಸೌಖ್ಯವಿತ್ತು ಮತ್ತು ಆತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದರು ಮತ್ತು ದೆಹಲಿಯ ವೈದ್ಯರು ಗುಣಪಡಿಸಲು ಆಗುವುದಿಲ್ಲ ಎಂದು ಕೈಚೆಲ್ಲಿದ್ದರಂತೆ. ಹೀಗಾಗಿ ಪೋಷಕರು ಇಲ್ಲಿಗೆ ಬಂದಿದ್ದಾರೆ.
ವೀಡಿಯೋದಲ್ಲಿ ಬಾಲಕನ ಪೋಷಕರು ಪ್ರಾರ್ಥನೆಗಳನ್ನು ಮಾಡುತ್ತಿರುವಾಗ ಆತನ ಚಿಕ್ಕಮ್ಮ ಆತನನ್ನು ನೀರಿನಲ್ಲಿ ಮುಳುಗಿಸಿದ್ದಾಳೆ. ಅಲ್ಲಿದ್ದ ಕೆಲವರು ಹುಡುಗ ನೀರಿನೊಳಗೆ ತುಂಬಾ ಹೊತ್ತು ಇದ್ದುದನ್ನು ಗಮನಿಸಿ ಹುಡುಗನನ್ನು ನೀರಿನಿಂದ ಮೇಲಕ್ಕೆ ತರುವಂತೆ ಹಾಗೂ ನೀರಿನಲ್ಲಿ ಮುಳುಗಿಸಬೇಡಿ ಎಂದು ಸೂಚಿಸಿದ್ದಾರೆ. ಆದರೆ ಮನೆಯವರು ಹಾಗೆ ಮಾಡದಿದ್ದಾಗ ಸ್ಥಳದಲ್ಲಿದ್ದವರು ತಾವೇ ಬಾಲಕನನ್ನು ನದಿ ನೀರಿನಿಂದ ಹೊರಗೆ ತಂದರು. ಮಗುವಿನ ಚಿಕ್ಕಮ್ಮ ಹುಡುಗನನ್ನು ಹೊರಗೆ ಎಳೆದವರ ಮೇಲೆ ಕೂಗಾಡಿದರು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ನಂತರ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಬಾಲಕನ ಚಿಕ್ಕಮ್ಮ ಶವದ ಪಕ್ಕದಲ್ಲಿ ಕುಳಿತು ಮಗು ಮತ್ತೆ ಬದುಕುವುದು ಖಚಿತ ಎಂದು ಹೇಳುತ್ತಿದ್ದರಂತೆ.
ದೆಹಲಿಯ ಉನ್ನತ ಆಸ್ಪತ್ರೆಯಲ್ಲಿ ಬಾಲಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಕುಟುಂಬದವರು ತಿಳಿಸಿರುವುದಾಗಿ ಹರಿದ್ವಾರ ನಗರ ಪೊಲೀಸ್ ಮುಖ್ಯಸ್ಥ ಸ್ವತಂತ್ರಕುಮಾರ ತಿಳಿಸಿದ್ದಾರೆ. ವೈದ್ಯರಿಗೆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಗಂಗಾ ನದಿಯು ಹುಡುಗನನ್ನು ಗುಣಪಡಿಸುತ್ತದೆ ಎಂದು ಕುಟುಂಬದವರು ನಂಬಿದ್ದರು. “ನಾವು ದೆಹಲಿ ಆಸ್ಪತ್ರೆಯಿಂದ ವರದಿಗಳನ್ನು ಪಡೆಯುತ್ತಿದ್ದೇವೆ. ಆದರೆ ಈ ಸಮಯದಲ್ಲಿ, ಅವರು ಗಂಗಾ ಸ್ನಾನವು ಆತನನ್ನು ಗುಣಪಡಿಸುತ್ತದೆ ಎಂದು ನಂಬಿದ್ದರಿಂದ ಅವರು ಇಲ್ಲಿಗೆ ಕರೆತಂದಿದ್ದಾರೆ ಎಂದು ತೋರುತ್ತದೆ” ಎಂದು ಅವರು ಹೇಳಿದರು.
ಬಾಲಕನ ಪೋಷಕರು ಮತ್ತು ಆತನ ಚಿಕ್ಕಮ್ಮನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement