ಕುಮಟಾ : ಹೆಗಲೆಯಲ್ಲಿ ಐದು ದಿನಗಳ ಕಾಲ ನಡೆದ ಅಪರೂಪದ ‘ಅಯುತ ಚಂಡಿಕಾ ಮಹಾಯಾಗ (ದಶಸಹಸ್ರ ಚಂಡಿಕಾ ಯಾಗ) ಸಂಪನ್ನ

ಕುಮಟಾ : ಭಾರತ ದೇಶದ ಇತಿಹಾಸದಲ್ಲೇ ಬೆರಳೆಣಿಕೆಯಷ್ಟು ಬಾರಿ ನಡೆದಿರುವ ಹಾಗೂ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ‘ಅಯುತ ಚಂಡಿಕಾ ಮಹಾಯಾಗ (ದಶಸಹಸ್ರ ಚಂಡಿಕಾ ಯಾಗ)’ವು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಲೆಯ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಭಾನುವಾರ ಸಂಪನ್ನಗೊಂಡಿದೆ.
ಜನವರಿ ೨೪ರಿಂದ ಜನವರಿ ೨೮ರ ಭಾನುವಾರದ ವರೆಗೆ ನಡೆದ ‘ಅಯುತ ಚಂಡಿಕಾ ಮಹಾಯಾಗ’ವನ್ನು ಒಂದೇ ಕುಟುಂಬದವರು ಆಯೋಜಿಸಿರುವುದು ಅಪರೂಪ ಎಂದು ಹೇಳಲಾಗಿದೆ. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದದಿಂದ ಈ ಮಹಾಯಾಗವು ಕುಟುಂಬದ ಹಿರಿಯರಾದ ಶ್ರೀಧರ ಕೃಷ್ಣ ಹೆಗಡೆ ನೇತೃತ್ದವಲ್ಲಿ ನಡೆಯಿತು. ವಿನಾಯಕ ಹೆಗಡೆ ಹಾಗೂ ಗುರುಪ್ರಕಾಶ ಹೆಗಡೆ ಅವರ ಮುಂದಾಳತ್ವದಲ್ಲಿ ತಾಂತ್ರಿಕರಾದ ಆಗಮಶ್ರೇಷ್ಠ ವೇ. ಮೂ. ಶಂಕರ ಭಟ್ಟ ಕಟ್ಟೆ ಅವರ ಆಚಾರ್ಯತ್ವದಲ್ಲಿ ಪುರೋಹಿತರಾದ ವೇ.ಮೂ.ಕೃಷ್ಣ ಗಣಪತಿ ಭಟ್ಟರ ಪೌರೋಹಿತ್ಯದಲ್ಲಿ ಹಾಗೂ ಋಗ್ವೇದ ಘನಪಾಠಿಗಳಾದ ವೇ. ಮೂ. ರಾಮಕೃಷ್ಣ ಭಟ್ಟ ಶಂಕರಲಿಂಗ, ಶ್ರೀ ಕರಿಕಾನಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ. ಮೂ. ಸುಬ್ರಹ್ಮಣ್ಯ ವಿಶ್ವೇಶ್ವರ ಭಟ್ಟ, ಶ್ರೀಕ್ಷೇತ್ರ ಹೆಗಲೆಯ ಪ್ರಧಾನ ಅರ್ಚಕ ಸುಬ್ರಾಯ ಪರಮೇಶ್ವರ ಭಟ್ಟ ಹಾಗೂ 350ಕ್ಕೂ ಅಧಿಕ ವೈದಿಕರು 4 ದಿನಗಳ ಕಾಲ ಪಾಲ್ಗೊಂಡು ಯಜ್ಞವನ್ನು ಸಂಪನ್ನಗೊಳಿಸಿದ್ದಾರೆ. ಪ್ರಮುಖವಾಗಿ ದಶಸಹಸ್ರ ಮೃತ್ಯುಂಜಯ ಹವನ, ಚತುರ್ದ್ರವ್ಯಾತ್ಮಕ ಸಹಸ್ರ ಮೋದಕ ಅಥರ್ವಶೀರ್ಷ ಹವನ, ಮಹಾರುದ್ರ (1331 ರುದ್ರ) ಸೇರಿದಂತೆ ಅನೇಕ ಮಹಾಯಾಗಗಳು ನೆರವೇರಿವೆ.
ಕಳೆದ ಒಂದೂವರೆ ವರ್ಷದಿಂದ ಎಂಟು ಜನ ವೈದಿಕರು ಪ್ರತಿದಿನ ಪಾರಾಯಣ ಮಾಡಿ ಅಯುತ ಚಂಡಿಕಾ ಯಾಗದ ಹತ್ತುಸಾವಿರ ಚಂಡಿಕಾ ಪಾರಾಯಣ ಮಾಡಿದ್ದಾರೆ.

ಜನವರಿ ೨೪ರಿಂದ  ಅಯುತ ಚಂಡಿಕಾ ಯಾಗದ ವಿವಿಧ ಕಾರ್ಯಕ್ರಮಗಳು ಆರಂಭವಾದವು. ಒಟ್ಟು ೨೫ ಕುಂಡುಗಳಲ್ಲಿ ಯಾಗಗಳು ನಡೆದವು. ಪ್ರಧಾನ ಕುಂಡದಲ್ಲಿ ೧೫ ಋತ್ವಿಜರು ಹಾಗೂ ಉಳಿದ ಕುಂಡಗಳಲ್ಲಿ ೧೧ ಋತ್ವಿಜರು ಐದು ದಿನಗಳ ಕಾಲ ವಿವಿಧ ಯಾಗಗಳಲ್ಲಿ ಪಾಲ್ಗೊಂಡರು. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದದಗಳ ಯಾಗಗಳೂ ನಡೆಯಿತು.
ಜನವರಿ ೨೪ರ ಬುಧವಾರ ಶ್ರೀ ಗುರುದೇವತಾ ಪ್ರಾರ್ಥನೆ, ಶ್ರೀ ಗಣೇಶಪೂಜೆ, ಪುಣ್ಯಾಹವಾಚನ, ದೇವನಾಂದಿ, ಶ್ರೀ ಮಂಗಲಮಾತೃಕಾಪೂಜಾ, ಕೌತುಕಪೂಜಾ, ಪ್ರಧಾನ ಸಂಕಲ್ಪ, ಋತ್ವಿಕ್ ವರ್ಣನೆ, ಮಧುಪರ್ಕಪೂಜಾ, ಅರಣೀಮಥನ, ಅಷ್ಟದ್ರವ್ಯಾತ್ಮಕ ಚತುರ್ನಾರಿಕೇಲ ಗಣಹವನ, ಪವಮಾನ ಹೋಮ, ಮಹಾರಾಜ್ಞೀ ಶ್ರೀ ದುರ್ಗಾ ಮೂಲಮಂತ್ರ ಹೋಮ, ಧ್ವಜಾಧಿವಾಸ ಹೋಮ, ರಾಕ್ಷೋಘ್ನ-ವಾಸ್ತು ವಿಧಾನಗಳು, ಶ್ರೀ ಮಹಾರಾಜ್ಞೀ ಅಯುತ ಚಂಡಿಕಾ ಯಾಗಶಾಲಾ ಪ್ರವೇಶ, ಉದಕಶಾಂತಿ, ಮೃತ್ತಿಕಾಹರಣ, ಬೀಜವಾಪನ, ಅಗ್ನಿಜನನ, ಸಮಗ್ರ ಕಲಶಸ್ಥಾಪನೆ, ಶ್ರೀ ಭೇರಿತಾಡನ, ಉತ್ಸವ, ಶ್ರೀ ಬಲಿ ವಿಧಾನಗಳು, ಮಹಾಪೂಜೆ ಮೊದಲಾದ ಕಾರ್ಯಕ್ರಮಗಳು ನಡೆಯಿತು.

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

ಜನವರಿ ೨೫ರ ಗುರುವಾರ ಬೆಳಿಗ್ಗೆ ಶ್ರೀ ಉದಯಬಲಿ, ಚತುರ್ದ್ರವ್ಯಾತ್ಮಕ ಸಹಸ್ರ ಗಣಪತಿ ಅಥರ್ವಶೀರ್ಷ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಸುಹಾಸಿನಿಯರಿಂದ ಕುಂಕುಮಾರ್ಚನೆ, ಪಂಚವಿಂಶತಿ ಕುಂಡಗಳಲ್ಲಿ ಅಯುತ ಚಂಡಿಕಾ ಮಹಾಯಾಗ ಪ್ರಾರಂಭ, ಸಂಜೆ ಶ್ರೀ ಲಲಿತಾರಾಧನೆ, ಶ್ರೀ ಪಲ್ಲಕ್ಕಿಉತ್ಸವ, ಶ್ರೀ ಬಲಿ, ರಾಜೋಪಚಾರಸೇವಾ ಮೊದಲಾದ ಕಾರ್ಯಕ್ರಮಗಳು ನಡೆಯಿತು. ಜನವರಿ ೨೬ರ ಶುಕ್ರವಾರ ಬೆಳಿಗ್ಗೆ ಪಂಚವಿಂಶತಿ ಕುಂಡಗಳಲ್ಲಿ ಅಯುತ ಚಂಡಿಕಾ ಹೋಮ, ನವಗ್ರಹ ಶಾಂತಿ, ಸೌರಸೂಕ್ತ ಹೋಮ, ಅಷ್ಟದ್ರವ್ಯಾತ್ಮಕ ಗಾಯತ್ರೀ ಹೋಮ, ಅಂದು ಸಂಜೆ ಶ್ರೀ ದುರ್ಗಾ ಸಹಸ್ರನಾಮಾರ್ಚನೆ, ಉತ್ಸವ, ಮಹಾಬಲಿ, ರಂಗಪೂಜಾ, ರಾಜೋಪಚಾರಸೇವಾ ಮೊದಲಾದ ಕಾರ್ಯಕ್ರಮಗಳು ನಡೆಯಿತು.

ಜನವರಿ ೨೭ರ ಶನಿವಾರ ಬೆಳಿಗ್ಗೆ ಪಂಚವಿಂಶತಿ ಕುಂಡಗಳಲ್ಲಿ ಅಯುತ ಚಂಡಿಕಾ ಹೋಮ, ಸಪ್ತದ್ರವ್ಯಾತ್ಮಕ ದಶಸಹಸ್ರ ಮೃತ್ಯುಂಜಯ ಹವನ, ಮಹಾರುದ್ರ ಹೋಮ, ಸಂಜೆ ತ್ರಿಶತೀ ಪೂಜಾ, ಶ್ರೀ ಭೂತಬಲಿ, ಶ್ರೀ ಯೋಗಿನಿ ಬಲಿ, ಶ್ರೀ ಕ್ಷೇತ್ರಪಾಲ ಬಲಿ, ರಾಜೋಪಚಾರಸೇವಾ, ಮಹಾಪೂಜೆ ನಡೆಯಿತು. ಜನವರಿ ೨೮ ಭಾನುವಾರ ಬೆಳಿಗ್ಗೆ ಪಂಚವಿಂಶತಿ ಕುಂಡಗಳಲ್ಲಿ ಅಯುತ ಚಂಡಿಕಾ ಮಹಾಯಾಗ, ಅಷ್ಟದ್ರವ್ಯಾತ್ಮಕ ದುರ್ಗಾಶಾಂತಿ, ಶ್ರೀಸೂಕ್ತ ಹೋಮ, ಪುರುಷಸೂಕ್ತ ಹೋಮ, ಸ್ಕಂದಶಾಂತಿ, ಸರ್ಪಸೂಕ್ತ ಹೋಮ, ಜನಾರ್ದನ ವಾಸುದೇವ ಮೂಲಮಂತ್ರಹೋಮ ನಡೆಯಿತು. ನಂತರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಮಹಾಪೂರ್ಣಾಹುತಿ ನಡೆಯಿತು.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

ನಂತರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ರಾಘವೇಶ್ವರ ಶ್ರೀಗಳು, ಒಂದು ಕುಟುಂಬ ಲೋಕಕಲ್ಯಾಣಕ್ಕಾಗಿ ಅಯುತ ಚಂಡಿಕಾ ಯಾಗದಂತಹ ಮಹೋನ್ನತ ಹಾಗೂ ಆ ಕಾಲದ ಅಶ್ವಮೇಧಯಾಗಕ್ಕೆ ಸರಿಸಮನಾಗಬಲ್ಲ ಯಾಗವನ್ನು ಮಾಡಿರುವುದು ಬಹಳ ವಿಶೇಷ ಎಂದು ಹೇಳಿದ್ದಾರೆ.
ಲೋಕಕಲ್ಯಾಣಕ್ಕಾಗಿ ಒಂದು ಕುಟುಂಬ, ಅದರಲ್ಲಿಯೂ ಇಬ್ಬರು ಯುವ ಸಹೋದರರಾದ ವಿನಾಯಕ ಹೆಗಡೆ ಹಾಗೂ ಗುರುಪ್ರಕಾಶ ಹೆಗಡೆ ಮಾಡಿದ ಕಾರ್ಯ ಮುಂದಿನ ಸಮಾಜಕ್ಕೂ ಮಾದರಿಯಾಗಿದೆ. ಈ ಕಾರ್ಯಕ್ಕೆ ಹೆಗಲು ಕೊಟ್ಟವರು ಯುವಕರು. ಹೆಗಲು ಕೊಡುವವರು ಇದ್ದಿದ್ದ ಕಾರಣಕ್ಕೇ ಈ ಗ್ರಾಮವನ್ನು ‘ಹೆಗಲೆ’ ಎಂದು ಕರೆಯಲಾಗುತ್ತದೆ. ವೈದಿಕರು ಹತ್ತುಸಾವಿರ ಪಾರಾಯಣ ಮಾಡಿದ್ದು, ಹಾಲಕ್ಕಿಗಳು ಯಾಗ ಮಂಟಪವನ್ನು ನಿರ್ಮಾಣ ಮಾಡಿರುವುದೂ ನಿಜವಾಗಿಯೂ ತಪಸ್ಸು ಎಂದರು.

ಒಳ್ಳೆಯ ಕಾರ್ಯಗಳಿಗೆ ಹೊರಟಾಗ ದೇವರೇ ಪ್ರೇರಣೆಯನ್ನು ನೀಡುತ್ತಾನೆ, ದೇವರೇ ಕಾರ್ಯವನ್ನು ಮಾಡಿಸಿಕೊಳ್ಳುತ್ತಾನೆ, ಇದಕ್ಕೆ ಸಹಸ್ರಾರು ಜನರು ಸಾಕ್ಷಿಯಾಗಿದ್ದೀರಿ ಎಂದರು.
ಗುರುಪ್ರಕಾಶ ಹೆಗಡೆ ದೇವಾಲಯದ ಇತಿಹಾಸ ಹಾಗೂ ಈ ಹಿಂದೆ ನಡೆದ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ ಹೆಗಡೆ ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ವಂದಿಸಿದರು.
ಹೆಗಲೆ ಗ್ರಾಮದ ಹಾಲಕ್ಕಿ ಸಮಾಜದ ೧೦೦ ಜನರು ಸತತ ಒಂದೂವರೆ ತಿಂಗಳ ಕಾಲ ಯಾಗ ಮಂಟಪದ ನಿರ್ಮಾಣದಿಂದ ಹಿಡಿದುಈ ಕಾರ್ಯಕ್ರಮದ ತಯಾರಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ವಿನಾಯಕ ಹೆಗಡೆ ತಿಳಿಸಿದ್ದಾರೆ.

 

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement