ಲೋಕಸಭೆ ಚುನಾವಣೆ :ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ; ಉತ್ತರ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಟಿಕೆಟ್ ಘೋಷಿಸಿದ ಸಮಾಜವಾದಿ ಪಕ್ಷ…!

ಲಕ್ನೋ : ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರಸ್ಸಿಗೆ ಶಾಕ್‌ ನೀಡಿದೆ. ಕಾಂಗ್ರೆಸ್ ಗಮನಕ್ಕೂ ತರದೆ ಸಮಾಜವಾದಿ ಪಕ್ಷವು ಲೋಕಸಭೆ ಚುನಾವಣೆಗಾಗಿ ಏಕಾಏಕಿ ತನ್ನ 16 ಅಭ್ಯರ್ಥಿಗಳ ಪಟ್ಟಿಯನ್ನು . ಬಿಡುಗಡೆ ಮಾಡಿದೆ. ಇದು ಅನಿರೀಕ್ಷಿತವಲ್ಲವಾದರೂ ಇದರಿಂದ ಕಾಂಗ್ರೆಸ್ಸಿಗೆ ಹೊಡೆತವನ್ನಂತೂ ನೀಡಿದೆ.
ಲೋಕಸಭಾ ಚುನಾವಣೆಗೆ ಎಸ್‌ಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲೇಶ ಯಾದವ್ ಅವರು, ನಮ್ಮ ಪಕ್ಷ ನಮಗೆ ಯಾವುದು ಉತ್ತಮವೋ ಅದನ್ನೇ ಮಾಡುತ್ತದೆ. ಇದಕ್ಕೆ ನಮಗೆ ಕಾಂಗ್ರೆಸ್‌ ಪಕ್ಷದ ಒಪ್ಪಿಗೆ ಬೇಕಿಲ್ಲ ಎಂದು ಹೇಳಿದ್ದಾರೆ. ಅಖಿಲೇಶ ಯಾದವ್ ಅವರು, ಉತ್ತರ ಪ್ರದೇಶದಲ್ಲಿ ಸ್ಪರ್ಧೆ ಮಾಡಲಿರುವ ತಮ್ಮ ಪಕ್ಷದ 16 ಅಭ್ಯರ್ಥಿಗಳ ಹೆಸರು ಹಾಗೂ ಕ್ಷೇತ್ರದ ಮಾಹಿತಿ ಇರುವ ಪಟ್ಟಿ ಪ್ರಕಟಿಸಿದ್ದಾರೆ. 16 ಕ್ಷೇತ್ರಗಳಿಗೆ ಸಮಾಜವಾದಿ ಪಕ್ಷ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಖಿಲೇಶ್ ಸಿಂಗ್ ಯಾದವ್ ಪತ್ನಿ ಡಿಂಪಲ್ ಯಾದವ್ ಅವರ ಹೆಸರೂ ಕೂಡಾ ಇದ್ದು, ಅವರು ಮಣಿಪುರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ಕಾಂಗ್ರೆಸ್ ಪಕ್ಷದ ಜೊತೆ ಸಮಾಜವಾದಿ ಪಕ್ಷದ ಸೀಟು ಹಂಚಿಕೆ ಮಾತುಕತೆ ಇನ್ನೂ ನಡೆದಿಲ್ಲ. ಯಾವೆಲ್ಲಾ ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಆದಾಗ್ಯೂ ಸಮಾಜವಾದಿ ಪಕ್ಷವು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ಕಳೆದ ಒಂದು ವಾರಗಳ ಅವಧಿಯಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ನಾಲ್ಕನೇ ಹೊಡೆತ ಇದಾಗಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾಂಗ್ರೆಸ್‌ ಜೊತೆ ಸ್ಥಾನ ಹೊಂದಾಣಿಕೆ ಇಲ್ಲದೆ ಟಿಎಂಸಿ ಏಕಾಂಗಿ ಹೋರಾಟ ನಡೆಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಈಗಾಗಲೇ ಘೋಷಿಸಿದ್ದಾರೆ. ಪಂಜಾಬ್‌ನಲ್ಲೂ ಕಾಂಗ್ರೆಸ ಜೊತೆ ಸೀಟು ಹಂಚಿಕೆ ಇಲ್ಲ ಎಂದು ಹೇಳಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಎಎಪಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಹಾಗೂ ಮಹಾ ಘಟಬಂಧನ ಸರ್ಕಾರದ ಭಾಗವಾಗಿದ್ದ ಮುಖ್ಯಮಂತ್ರಿ ನಿತೀಶಕುಮಾರ ಅವರು ಮತ್ತೆ ಎನ್‌ಡಿಎ ಒಕ್ಕೂಟ ಸೇರಿ ಬಿಹಾರದಲ್ಲಿ ನೂತನ ಸರ್ಕಾರ ರಚಿಸುವ ಮೂಲಕ ಕಾಂಗ್ರೆಸ್‌ಗೆ ಆಘಾತ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

ಈಗ ನಾಲ್ಕನೇ ಆಘಾತದ ರೂಪದಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್‌ ಜೊತೆ ಚರ್ಚಿಸಿ ಸೀಟು ಹಂಚಿಕೆಗೆ ಮುನ್ನವೇ ಏಕಪಕ್ಷೀಯವಾಗಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶ ರಾಜ್ಯದಲ್ಲಿ 2024ರ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ ಅವರು ಕಾಂಗ್ರೆಸ್‌ಗೆ 11 ಕ್ಷೇತ್ರ ನೀಡುವುದಾಗಿ ಹೇಳಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇರಲಿಲ್ಲವಾದರೂ ಅಮೇಥಿ ಹಾಗೂ ರಾಯ್‌ಬರೇಲಿಯಲ್ಲಿ ಸಮಾಜವಾದಿ ಪಕ್ಷದಿಂದ ಯಾರೂ ಸ್ಪರ್ಧಿಸದೆ ಕಾಂಗ್ರೆಸ್ಸಿಗೆ ಬೆಂಬಲ ನೀಡಿತ್ತು. ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಗೆದ್ದರು, ಆದರೆ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಸೋಲಿಸಿ ಕಾಂಗ್ರೆಸ್ಸಿಗೆ ಆಘಾತ ನೀಡಿದ್ದರು.

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement