ಕೋರ್ಟ್‌ ಆದೇಶದ ಬೆನ್ನಲ್ಲೇ ಕಾಶಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ನಡೆದ ಪೂಜೆ, ಆರತಿ

ವಾರಾಣಸಿ: ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಕಾಶಿಯ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಬುಧವಾರ (ಜನವರಿ 31) ರಾತ್ರಿ ಪೂಜೆ ಸಲ್ಲಿಸಲಾಯಿತು ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ನಾಗೇಂದ್ರ ಪಾಂಡೆ ತಿಳಿಸಿದ್ದಾರೆ.
ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ವಿಗ್ರಹಗಳಿಗೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ಬುಧವಾರ (ಜನವರಿ 31) ತೀರ್ಪು ನೀಡಿತ್ತು.
‘ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಅರ್ಚಕರಿಗೆ ಕೋರ್ಟ್‌ ಅವಕಾಶ ನೀಡಿದೆ. ಇದಕ್ಕಾಗಿ ವಾರದಲ್ಲಿ ಅಗತ್ಯ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನ್ಯಾಯಾಲಯ ಆದೇಶಿಸಿತ್ತು.
ಬುಧವಾರ ರಾತ್ರಿ 10:30 ಗಂಟೆಗೆ ಸುಮಾರು 31 ವರ್ಷಗಳ ನಂತರ ವ್ಯಾಸ್ ಕಾ ತೆಹ್ಖಾನಾ ನೆಲಮಹಡಿಯನ್ನು ಪ್ರಾರ್ಥನೆಗಾಗಿ ತೆರೆಯಲಾಯಿತು. ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತವು ಪೂಜೆ ಸಲ್ಲಿಸಲು ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಅತ್ಯಂತ ತ್ವರಿತವಾಗಿ ಮಾಡಿದೆ ಎಂದು ಪಾಂಡೆ ಹೇಳಿದ್ದಾರೆ.

ಪೂಜೆ ಪ್ರಾರಂಭವಾಗುವ ಮೊದಲು, ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್. ರಾಜಲಿಂಗಂ ಮತ್ತು ಪೊಲೀಸ್ ಕಮಿಷನರ್ ಅಶೋಕ ಮುತಾ ಜೈನ್ ಅವರು ಮಧ್ಯರಾತ್ರಿಯ ಸುಮಾರಿಗೆ ಸಭೆ ನಡೆಸಿದರು. ಕಾಶಿ ವಿಶ್ವನಾಥ ಧಾಮದ ಆವರಣದಲ್ಲಿರುವ ಸಭಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಲಾಯಿತು. ಚರ್ಚೆಯ ನಂತರ, ನ್ಯಾಯಾಲಯದ ತೀರ್ಪಿನ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಜಿಲ್ಲಾಡಳಿತವು ಕ್ರಮ ಕೈಗೊಂಡಿತು.

ದಕ್ಷಿಣ ನೆಲಮಾಳಿಗೆಗೆ ಸುಗಮ ಪ್ರವೇಶವನ್ನು ಅನುಮತಿಸಲು ಬ್ಯಾರಿಕೇಡ್‌ಗಳೊಳಗೆ ಒಂದು ಮಾರ್ಗವನ್ನು ತೆರವುಗೊಳಿಸಲಾಯಿತು, ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜಾ ವಿಧಿವಿಧಾನಗಳನ್ನು ಅಡೆತಡೆಯಿಲ್ಲದೆ ಆಚರಿಸುವುದನ್ನು ಖಾತ್ರಿಪಡಿಸಲಾಯಿತು. ಬ್ಯಾರಿಕೇಡ್ ತೆಗೆದು ನ್ಯಾಯಾಲಯದ ಆದೇಶ ಪಾಲಿಸಲಾಗಿದೆ ಎಂದು ರಾಜಲಿಂಗಂ ತಿಳಿಸಿದರು.
ಇದೇ ವೇಳೆ ಜ್ಞಾನವಾಪಿ ಸಂಕೀರ್ಣದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಾರಾಣಸಿ ಜಿಲ್ಲಾ ನ್ಯಾಯಾಲಯವು ಬುಧವಾರ ಹಿಂದೂ ಆರಾಧಕರಿಗೆ ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಗಳಲ್ಲಿ ಒಂದು ನೆಲಮಾಳಿಗೆಯಲ್ಲಿ ಪ್ರಾರ್ಥನೆ ಮಾಡಲು ಅನುಮತಿ ನೀಡಿದೆ.

ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ್‌ ಅವರು, ‘ನ್ಯಾಯಾಲಯದ ಆದೇಶವನ್ನು ಅನುಸರಿಸುವಾಗ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ವಾರಾಣಸಿ ಜಿಲ್ಲಾ ನ್ಯಾಯಾಲಯವು ಪೂಜೆಗೆ ವ್ಯವಸ್ಥೆ ಕಲ್ಪಿಸಲು ಏಳು ದಿನಗಳ ಅವಧಿಯನ್ನು ನಿಗದಿಪಡಿಸಿದೆ. ಆದರೆ, ನ್ಯಾಯಾಲಯದ ಆದೇಶದ ಜಾರಿ ಬಗ್ಗೆ ಸರ್ಕಾರ ತೋರುತ್ತಿರುವ ಆತುರವು ಆ ಪ್ರಕರಣದಲ್ಲಿ ಪ್ರತಿ ವಾದಿಗೆ ಯಾವುದೇ ಕಾನೂನಿನ ಆಶ್ರಯ ಸಿಗಬಾರದು ಎಂಬಂತಿದೆ ಎಂದು ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement