ದೆಹಲಿಯಲ್ಲಿ ಫೆ.7 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧರಣಿ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲಿನ ಅನುದಾನ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ನಡೆಯುವ ಧರಣಿಯ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ. ಅಲ್ಲದೆ, ರಾಜ್ಯದ 138 ಶಾಸಕರು, ಕಾಂಗ್ರೆಸ್ ಸಂಸದರು, ವಿಧಾನ ಪರಿಷತ್ ಸದಸ್ಯರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ನಾವೆಲ್ಲರೂ ಫೆಬ್ರವರಿ 6 ರಂದು ದೆಹಲಿ ತಲುಪಲಿದ್ದು, ಫೆ.7 ರಂದು ಪ್ರತಿಭಟನೆ ನಡೆಸಲಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಅಹವಾಲನ್ನು ಕೇಳಬೇಕು. ರಾಜ್ಯದ ವಿಷಯದಲ್ಲಿ ಪಕ್ಷ ಭೇದ ಬದಿಗಿಟ್ಟು ರಾಜ್ಯದ ಎಲ್ಲ ಸಂಸದರು ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು ಧರಣಿ ನಡೆಸಲು ಅನುಮತಿ ಕೋರಿ ದೆಹಲಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಕಳೆದ ಐದು ವರ್ಷಗಳಲ್ಲಿ ನಮ್ಮ ಪಾಲಿನ 62,000 ಕೋಟಿ ರೂಪಾಯಿ ಹಣ ನಮಗೆ ತಲುಪಿಲ್ಲ. ಕೇಂದ್ರದ ಅನುದಾನದಲ್ಲಿ ಕರ್ನಾಟಕದ ಪಾಲಿನ ಹಣದ ಕಡಿತವು ‘ಡಬಲ್ ಎಂಜಿನ್’ ಸರ್ಕಾರದ ಅವಧಿಯಲ್ಲೂ ನಡೆದಿದೆ. ಕರ್ನಾಟಕದ 200 ಕ್ಕೂ ಹೆಚ್ಚು ತಾಲೂಕುಗಳು ತೀವ್ರ ಬರಗಾಲದಿಂದ ತತ್ತರಿಸುತ್ತಿವೆ ಆದರೆ ಕೇಂದ್ರವು ರಾಜ್ಯಕ್ಕೆ ಪರಿಹಾರ ಮಂಜೂರು ಮಾಡಿಲ್ಲ. ಹೀಗಾಗಿ ರಾಜ್ಯದ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement