ಬಜೆಟ್‌ ಅಧಿವೇಶನದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡದಿದ್ರೆ ಉಸ್ತುವಾರಿ ಸಚಿವರ ಕಚೇರಿ ಮುಂದೆಯೇ ಆಮರಣಾಂತ ಉಪವಾಸ : ಸರ್ಕಾರಕ್ಕೆ ಅನಂತಮೂರ್ತಿ ಹೆಗಡೆ ಎಚ್ಚರಿಕೆ

 ಕುಮಟಾ : ಭೌಗೋಳಿಕ ಪರಿಸ್ಥಿತಿ ಹಾಗೂ ಜಿಲ್ಲೆಯ ವಿಸ್ತಾರ ಗಮನಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತುರ್ತು ಅಗತ್ಯವಿದ್ದು, ಒಂದು ವೇಳೆ ಫೆಬ್ರವರಿ ೧೬ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಕಚೇರಿ ಮುಂದೆ ಕುಳಿತು ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ಔದ್ಯೋಗಿಕ ಪಾರ್ಕ್‌ ಸ್ಥಾಪನೆಗೆ ಒತ್ತಾಯಿಸಿ ಕುಮಟಾದಿಂದ ಭಟ್ಕಳದ ವರೆಗೆ ಹಮ್ಮಿಕೊಂಡಿರುವ ಸೋಮವಾರದಿಂದ ಪಾದಯಾತ್ರೆಯ ಚಾಲನೆ ನೀಡಿದ ವೇಳೆ ಪಟ್ಟಣದ ಮಾಸ್ತಿಕಟ್ಟೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಮನಗಂಡು ಹಿಂದಿನ ಬಿಜೆಪಿ ಸರ್ಕಾರ ಇದಕ್ಕಾಗಿ ಜಾಗವನ್ನು ಗುರುತಿಸಿತ್ತು. ನಂತರದ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆ ಬಗ್ಗೆ ಈ ಬಗ್ಗೆ ಇನ್ನೂ ಸಣ್ಣದೊಂದು ಕ್ರಮ ಕೈಗೊಂಡಿಲ್ಲ. ಇದೇ ರೀತಿ ನಿರ್ಲಕ್ಷ್ಯ ತಾಳಿದರೆ ಆಸ್ಪತ್ರೆ ನಿರ್ಮಾಣಕ್ಕಾಗಿ ನಡೆಯುತ್ತಿರುವ ಸ್ವಾಭಿಮಾನದ ಹೋರಾಟ ಇನ್ನೂ ತೀಕ್ಷ್ಣವಾಗಿರುತ್ತದೆ. ಫೆ.೧೬ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ನೀಡಬೇಕು. ಆಸ್ಪತ್ರೆಗೆ ಸ್ಥಳ ನಿಗದಿಯಾಗಿದೆ. ಆದರೆ ಮುಂದಿನ ಯಾವೊಂದು ಪ್ರಕ್ರಿಯೆಯೂ ನಡೆಯುತ್ತಿಲ್ಲ. ಅದಕ್ಕೆ ಹಣ ಬಿಡುಗಡೆಯಾದರೆ ಮುಂದಿನ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಕುಮಟಾದಲ್ಲಿ ಈ ಹಿಂದೆಯೇ ಆಸ್ಪತ್ರೆಗೆ ಸ್ಥಳ ನಿಗದಿಯಾದರೂ ಯಾಕಿನ್ನೂ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂಬ ಜನರ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ವಯಸ್ಸಾದ ತಂದೆ-ತಾಯಿಗಳಿಗೆ ಆಸ್ಪತ್ರೆಗೆ ಹೋಗಲು ಆಸ್ಪತ್ರೆ ಇಲ್ಲ. ಮಕ್ಕಳಿಗೆ ಸ್ಥಳೀಯವಾಗಿ ಉದ್ಯೋಗ ಇಲ್ಲದೆ ಅವರು ಉದ್ಯೋಗ ಅರಸಿ ದೂರದ ಊರಿಗೆ ಹೋಗುತ್ತಿದ್ದಾರೆ. ಹೀಗಾಗಿ ಸರ್ಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕವಾದ ಸಾಫ್ಟ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಸ್ಥಾಪಿಸಬೇಕು. ಹಿರೇಗುತ್ತಿಯಲ್ಲಿ ಸರ್ಕಾರ ಅಧೀನದ ಕೆಐಎಡಿಬಿಯ ೧೮೦೦ ಎಕರೆ ಜಾಗವಿದೆ. ಅದು ಹಾಗೆಯೇ ಬಿದ್ದುಕೊಂಡಿದೆ. ಕನಿಷ್ಠ ೧೦೦೦ ಎಕರೆಯಲ್ಲಿ ಸಾಫ್ಟ್‌ವೇರ್ ಪಾರ್ಕ್ ಮಾಡಿ ಕಂಪನಿಗಳನ್ನು ಆಹ್ವಾನಿಸಿ ಜಾಗ ನೀಡಬೇಕು. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕೂಡ ೨೦-೫೦ ಎಕರೆ ಪ್ರದೇಶದಲ್ಲಿ ಸಣ್ಣ ಸಣ್ಣ ಔದ್ಯೋಗಿಕ ಕ್ಲಸ್ಟರ್‌ ಮಾಡದಾಗ ಯುವಕರಿಗೆ ಉದ್ಯೋಗ ಸಿಗುತ್ತದೆ. ಸರ್ಕಾರವೇ ಇಂಡಸ್ಟ್ರಿಯಲ್ ಕ್ಲಸ್ಟರ್‌ ಮಾಡಿ ಫ್ಯಾಕ್ಟರಿಗಳಿಗೆ ಹಂಚಿಕೆ ಮಾಡಬೇಕು ಎಂದರು.ಕುಮಟಾದಿಂದ ಪಾದಯಾತ್ರೆ ಹೊರಟು ಬುಧವಾರ ಭಟ್ಕಳದಲ್ಲಿ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರಿಗೆ ಈ ಬಗ್ಗೆ ಮನವಿ ನೀಡುತ್ತೇವೆ. ಇದು ಸರ್ಕಾರಕ್ಕೆ ಜಿಲ್ಲೆಯ ಜನ ಕೊಡುತ್ತಿರುವ ಎಚ್ಚರಿಕೆಯಾಗಿದೆ. ಒಂದು ವೇಳೆ ಬಜೆಟ್ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಆಸ್ಪತ್ರೆಗೆ ಹಣ ನೀಡಿಲ್ಲವಾದರೆ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರ ಭಟ್ಕಳದ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ ಈ ಹಿಂದೆಯೂ ನಾನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಧ್ವನಿ ಎತ್ತಿದೇನೆ. ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಕರಾವಳಿ ಎಂದರೆ ಮಂಗಳೂರು, ಉಡುಪಿ, ಮಲ್ಪೆ ಎಂದು ಜನ ತಿಳಿದುಕೊಂಡಿದ್ದಾರೆ. ನಮ್ಮ ಜಿಲ್ಲೆ ನಿರ್ಲಕ್ಷಕ್ಕೆ ಒಳಗಾಗಿದೆ. ನಮ್ಮ ಜಿಲ್ಲೆಯಲ್ಲಿಯೂ ಕರಾವಳಿಯಲ್ಲಿ ಬರುತ್ತದೆ ಎಂಬುದು ಅನೇಕ ಶಾಸಕರುಗಳಿಗೆ ಕಲ್ಪನೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನೋಡಲಾಗಿತ್ತು. ಆದರೆ ಇಂದಿನ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ್ ಆಸ್ಪತ್ರೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಇದು ಅನಂತಮೂರ್ತಿ ಹೆಗಡೆಯವರ ಒಬ್ಬರ ವಿಷಯವಲ್ಲ. ಇದು ಜಿಲ್ಲೆಯ ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯಾಗಿದೆ ನಮ್ಮ ಜಿಲ್ಲೆ ಕೇವಲ ತ್ಯಾಗ ಮಾಡಲಿಕ್ಕೆ ಮಾತ್ರ ಬೇಕಾ? ಪರಿಸರಕ್ಕೆ ಹಾನಿಯಾಗುವ, ಜನರನ್ನು ಒಕ್ಕಲೆಬ್ಬಿಸುವ ಯೋಜನೆ ಇದ್ದರೆ ಉತ್ತರ ಕನ್ನಡ ಜಿಲ್ಲೆಗೆ, ಉದ್ಯೋಗ ಸೃಷ್ಟಿಯಾಗುವ ಯೋಜನೆಗಳಿದ್ದರೆ ಬೇರೆ ಜಿಲ್ಲೆಗೆ ಎಂಬಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಆಸ್ಪತ್ರೆ ಆಗಿಯೇ ಆಗುತ್ತದೆ. ಆದರೆ ಮನಸ್ಸು ಮಾಡಬೇಕು. ನಮ್ಮ ಹೋರಾಟ ಆಸ್ಪತ್ರೆ ಆಗುವವರೆಗೆ ಯಾವುದೇ ಕಾರಣಕ್ಕೂ ನಿಲ್ಲಕೂಡದು. ಅನಂತಮೂರ್ತಿ ಹೆಗಡೆ ಅವರ ಹೋರಾಟಕ್ಕೆ ಪಕ್ಷಾತೀತವಾಗಿ ಕೈಜೋಡಿಸಿ, ಕುಮಟಾದಲ್ಲಿ ಆಸ್ಪತ್ರೆ ಆಗಲೇಬೇಕು ಎಂದು ಹೋರಾಟ ಬಲಗೊಳಿಸಬೇಕಿದೆ. ಅನಂತಮೂರ್ತಿ ಹೆಗಡೆಯವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಅಲ್ಲದೆ, ಈ ನಿಟ್ಟಿನಲ್ಲಿ ನಾನು ಅಧಿವೇಶನದಲ್ಲಿಯೂ ಹೋರಾಟ ಮಾಡುತ್ತೇನೆ ಎಂದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಅನಂತಮೂರ್ತಿ ಹೆಗಡೆಯವರು ದೃಢವಾಗಿ ಹೋರಾಟ ಮಾಡುತ್ತಿದ್ದಾರೆ ಇವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಇದು ಉತ್ತರ ಕನ್ನಡ ಜಿಲ್ಲೆಯ ಜನರ ಅತ್ಯಂತ ನ್ಯಾಯಯುತವಾದ ಬೇಡಿಕೆಯಾಗಿದ್ದು, ಯಾವ್ಯಾವುದಕ್ಕೋ ಹಣ ನೀಡುವ ಸರ್ಕಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಕೊಡಲು ಮೀಮಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ಆರ್.ಜಿ ನಾಯ್ಕ ಮಾತನಾಡಿ ಜಿಲ್ಲೆಯ ಎಲ್ಲ ಶಾಸಕರೂ ಒಂದಾಗಿ ಈ ಬಗ್ಗೆ ಧ್ವನಿ ಎತ್ತಬೇಕು. ಶಾಸಕ ದಿನಕರ ಶೆಟ್ಟಿಯವರ ಜೊತೆಗೆ ಯುವ ಸಮುದಾಯ ಇದ್ದು, ಸದನದಲ್ಲಿ ಅವರು ಈ ಬಗ್ಗೆ ಧ್ವನಿ ಎತ್ತಬೇಕು. ಕೈಗಾ ಅಣುಸ್ಥಾವರ, ಶರಾವತಿ ಮೊದಲಾದ ಯೋಜನೆಗಳಿಗೆ ನಾವು ತ್ಯಾಗ ಮಾಡಿದ್ದೇವೆ. ಆದರೆ ನಮಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಡಲೂ ಸರ್ಕಾರ ವಿಫಲವಾಗಿದೆ. ಕೈಗಾ ಸುತ್ತ ಮುತ್ತ ಕ್ಯಾನ್ಸರ್ ಹರಡುತ್ತಿದ್ದು, ಆದರೆ ಈ ಯೋಜನೆಯಿಂದ ಉಳಿದವರು ನಮ್ಮ ಲಾಭ ಪಡೆಯುತ್ತಿದ್ದಾರೆ. ಉತ್ತರ ಕನ್ನಡಕ್ಕೆ ಅನ್ಯಾಯವಾಗುತ್ತಿದ್ದು ಈ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲೂ ನಾವು ಸಿದ್ಧರಾಗಬೇಕು ಎಂದರು.
ಪಾದಯಾತ್ರೆಯಲ್ಲಿ ರಾಜ್ಯ ಅನ್ನದಾತ ರೈತ ಸಂಘದ ಅಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿಯ ಅಧ್ಯಕ್ಷ ಉಮೇಶ ಹರಿಕಾಂತ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement