ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಬಹುದೊಡ್ಡ ವಂಚನೆ : ನಕಲಿ ʼಸಿಎಫ್‌ಒ’ನಿಂದ ವೀಡಿಯೊ ಕರೆ ಮೂಲಕ ಕಂಪನಿಗೆ 200 ಕೋಟಿ ರೂ. ಪಂಗನಾಮ ; ಮೋಸದಾಟ ಹೇಗಾಯ್ತು? ವಿವರ ಇಲ್ಲಿದೆ

ಬಹುರಾಷ್ಟ್ರೀಯ ಕಂಪನಿಯ ಹಾಂಗ್ ಕಾಂಗ್ ಶಾಖೆಯು $25.6 ಮಿಲಿಯನ್ (200 ಕೋಟಿ ರೂ.) ಕಳೆದುಕೊಂಡಿದೆ. ವಂಚಕರು ಡೀಪ್‌ಫೇಕ್ ತಂತ್ರಜ್ಞಾನ ಬಳಸಿಕೊಂಡು ವೀಡಿಯೊ ಕಾನ್ಫರೆನ್ಸ್ ಕರೆಯಲ್ಲಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ (CFO) ಎಂದು ಪೋಸ್ ನೀಡಿ ಹಣ ವರ್ಗಾವಣೆಗೆ ಆದೇಶಿಸಿ ಹಣ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಸಹೋದ ಉದ್ಯೋಗಿ ಹೊರತುಪಡಿಸಿ ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಹಾಜರಿದ್ದವರೆಲ್ಲರೂ ನಿಜವಾದ ವ್ಯಕ್ತಿಗಳಲ್ಲ, ಅವರು ನಿಜವಾದ ವ್ಯಕ್ತಿಗಳಂತೆ ಕಾಣುವ ಡೀಪ್‌ಫೇಕ್‌ ನಕಲಿಗಳು ಎಂದು ಕಂಡುಬಂದಿದೆ. ಸಭೆಯಲ್ಲಿ ಹಣದ ವರ್ಗಾವಣೆಗೆ ಆದೇಶಿಸಲಾಯಿತು. ಅದರಂತೆ ಹಣ ವರ್ಗಾಯಿಸಲಾಯಿತು ಎಂದು ಹಾಂಗ್ ಕಾಂಗ್ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವು ಹಾಂಗ್ ಕಾಂಗ್‌ನಲ್ಲಿ ಇದೇ ಮೊದಲನೆಯದು ಎಂದು ಪೊಲೀಸರು ಹೈಲೈಟ್ ಮಾಡಿದ್ದಾರೆ, ಇದರಲ್ಲಿ ದೊಡ್ಡ ಮೊತ್ತದ ಹಣವೂ ಸೇರಿದೆ. ಆದಾಗ್ಯೂ, ಅವರು ಉದ್ಯೋಗಿ ಅಥವಾ ಕಂಪನಿಯ ಗುರುತನ್ನು ಬಹಿರಂಗಪಡಿಸಲಿಲ್ಲ.

ಹಾಂಗ್ ಕಾಂಗ್ ಹಂಗಾಮಿ ಹಿರಿಯ ಸೂಪರಿಂಟೆಂಡೆಂಟ್ ಬ್ಯಾರನ್ ಚಾನ್ ಶುನ್-ಚಿಂಗ್ ಮಾತನಾಡಿ, “ಈ ಪ್ರಕರಣದಲ್ಲಿ, ಬಹು-ವ್ಯಕ್ತಿಗಳ ವೀಡಿಯೊ ಕಾನ್ಫರೆನ್ಸ್‌ನಲ್ಲಿ, ನೋಡಿದ ಪ್ರತಿಯೊಬ್ಬ ವ್ಯಕ್ತಯೂ ನಕಲಿ ಎಂಬುದು ಗೊತ್ತಾಗಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಉಲ್ಲೇಖಿಸಿದೆ.
ಈ ಸಂದರ್ಭದಲ್ಲಿ ವಂಚಕರು ಸಾರ್ವಜನಿಕವಾಗಿ ಲಭ್ಯವಿರುವ ವೀಡಿಯೊ ಮತ್ತು ಸಿಬ್ಬಂದಿ ಸದಸ್ಯರ ಮುಖಚರ್ಯೆ ಸೇರಿದಂತೆ ಇತರ ತುಣುಕನ್ನು ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಬಳಸಿ ಸಭೆಯಲ್ಲಿ ಭಾಗವಹಿಸುವವರಿಗೆ ನಂಬಿಕೆ ಬರುವಂತೆ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿ ಚಾನ್ ಪ್ರಕಾರ, ಕಂಪನಿಯ ಯುನೈಟೆಡ್ ಕಿಂಗ್‌ಡಂ ಮೂಲದ ಮುಖ್ಯ ಹಣಕಾಸು ಅಧಿಕಾರಿ (CFO) ಎಂದು ಪೋಸ್‌ ನೀಡಿದವನಿಂದ ಈ ಹಿಂದೆ ಸಂದೇಶವನ್ನು ಸ್ವೀಕರಿಸಿದ್ದಾಗ ಸಿಬ್ಬಂದಿ ಆತನ ಬಗ್ಗೆ ಅನುಮಾನಗೊಂಡಿದ್ದ. ಜನವರಿಯಲ್ಲಿ ಈ ಸಂದೇಶವನ್ನು ಫಿಶಿಂಗ್ ಇ ಮೇಲ್ ಎಂದು ಮೊದಲು ಕಡೆಗಣಿಸಿದ್ದ. ಆದರೆ ವೀಡಿಯೊ ಕರೆ ಮಾಡಿದ ನಂತರ ಆ ಉದ್ಯೋಗಿಯ ಅನುಮಾನ ದೂರವಾಯಿತು. ಏಕೆಂದರೆ ಹಾಜರಿದ್ದ ಇತರರು ಆತನಿಗೆ ಸಹೋದ್ಯೋಗಿಗಳಂತೆ ಕಾಣುತ್ತಿದ್ದರು. ಮತ್ತು ಅವರು ಪರಿಚಯವಿದ್ದವರಂತೆ ಇತರರನ್ನು ನೋಡುತ್ತಿದ್ದರು ಮತ್ತು ಅವರ ಜೊತೆ ಮಾತನಾಡುತ್ತಿದ್ದರು.

ವಂಚಕರು ಈ ಉದ್ಯೋಗಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಸೂಚಿಸಿದರು. ಆದರೆ ಸಭೆಯ ಸಮಯದಲ್ಲಿ ಆ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಲಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಪರದೆಯಲ್ಲಿ ಕಾಣುತ್ತಿದ್ದ ನಕಲಿ ವ್ಯಕ್ತಿಗಳು ಮುಖ್ಯವಾಗಿ ಕರೆ ಥಟ್ಟನೆ ಕೊನೆಗೊಳ್ಳುವ ಮೊದಲು ಆದೇಶಗಳನ್ನು ನೀಡುತ್ತಿದ್ದರು ಎಂದು ಅವರು ಹೇಳಿದರು.
ಉದ್ಯೋಗಿ ನಂತರ ಅವರ ಸೂಚನೆ ಪಾಲಿಸಿದ್ದಾನೆ ಮತ್ತು ಐದು ಹಾಂಗ್ ಕಾಂಗ್ ಬ್ಯಾಂಕ್ ಖಾತೆಗಳಿಗೆ $25.6 ಮಿಲಿಯನ್ (200 ಕೋಟಿ ರೂ.) ಮೊತ್ತದ ಹಣವನ್ನು 15 ಹಣಕಾಸಿನ ವರ್ಗಾವಣೆಗಳ ಮೂಲಕ ಮಾಡಿದ್ದಾನೆ. ಈ ಪ್ರಕ್ರಿಯೆ ಒಂದೇ ಬಾರಿ ನಡೆದಿಲ್ಲ, ಇದು ಒಂದು ವಾರದವರೆಗೆ ನಡೆಯಿತು, ನಂತರ ಉದ್ಯೋಗಿ ಕಂಪನಿಯ ಪ್ರಧಾನ ಕಚೇರಿಗೆ ಈ ಬಗ್ಗೆ ವಿಚಾರಣೆ ನಡೆಸಿದ್ದಾನೆ.

ಪೊಲೀಸರು ಈ ಪ್ರಕರಣದಲ್ಲಿ ಇದುವರೆಗೆ ಆರು ಜನರನ್ನು ಬಂಧಿಸಿದ್ದಾರೆ ಎಂದು ಚಾನ್ ಹೇಳಿದರು. ಹಗರಣಗಳಲ್ಲಿ ಭಾಗಿಯಾಗಿರುವ ಕಳುವಾದ ಎಂಟು ಹಾಂಗ್ ಕಾಂಗ್ ಗುರುತಿನ ಚೀಟಿಗಳ (dentity cards) ಬಗ್ಗೆಯೂ ಅವರು ಮಾತನಾಡಿದರು. ಪೊಲೀಸರ ಪ್ರಕಾರ, ಕಳೆದ ವರ್ಷ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಗುರುತಿನ ಚೀಟಿ (dentity card) ಯಲ್ಲಿ ಇರುವ ಜನರನ್ನು ಅನುಕರಿಸುವ ಮೂಲಕ 90 ಸಾಲದ ಅರ್ಜಿಗಳು ಮತ್ತು 54 ಬ್ಯಾಂಕ್ ಖಾತೆ ನೋಂದಣಿಗಳನ್ನು ಮಾಡಲು ಮುಖ ಗುರುತಿಸುವಿಕೆ ಪ್ರಕ್ರಿಯೆಯಲ್ಲಿ ಮೋಸಗೊಳಿಸಲು AI ಡೀಪ್‌ಫೇಕ್‌ಗಳನ್ನು ಬಳಸಿದ ಕನಿಷ್ಠ 20 ಘಟನೆಗಳು ನಡೆದಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement