ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಫೆ.೧೬ರ ಬಜೆಟ್‌ ನಲ್ಲೇ ಹಣ ನೀಡಿ : ಪಾದಯಾತ್ರೆಯಲ್ಲಿ ಸಾಗಿ ಸಚಿವರಿಗೆ ಮನವಿ ನೀಡಿ ಅನಂತಮೂರ್ತಿ ಹೆಗಡೆ ಒತ್ತಾಯ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಗತ್ಯವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಅತಿ ಶೀಘ್ರದಲ್ಲಿ ಆರಂಭಿಸಬೇಕು, ಆಸ್ಪತ್ರೆ ನಿರ್ಮಾಣಕ್ಕೆ ಈ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿ ಕುಮಟಾದಿಂದ ಭಟ್ಕಳದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಕಚೇರಿ ವರೆಗೆ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸಿದ ಸಾಮಾಜಿಕ ಹೋರಾಟಗಾರ ಬುಧವಾರ ಸಚಿವರಿಗೆ ಮನವಿ ಸಲ್ಲಿಸಿದರು.
ಸಚಿವರ ಅನುಪಸ್ಥಿತಿಯಲ್ಲಿ ಸಚಿವ ಮಂಕಾಳು ವೈದ್ಯ ಅವರ ಆಪ್ತ ಸಹಾಯಕ ನಾಗರಾಜ ನಾಯ್ಕ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ರಾಜ್ಯದ ಕರಾವಳಿ ಪ್ರದೇಶಗಳ ಸಮುದ್ರತೀರವನ್ನು ಸ್ವಚ್ಛಗೊಳಿಸುವ ಯೋಜನೆಗೆ ಮೀಸಲಿಟ್ಟ 840 ಕೋಟಿ ರೂ.ಗಳಲ್ಲಿ ಜಿಲ್ಲೆಯ ಜನರಿಗೆ ಬೇಕಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ, ಇಲ್ಲವೇ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡುವಂತೆ ಘೋಷಣೆ ಮಾಡಿ ಎಂದು ಒತ್ತಾಯಿಸಿದರು.
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ಆಗ್ರಹಿಸಿ ನಾನು ನಡೆಸಿದ ಪಾದಯಾತ್ರೆಯ ಹಿಂದೆ ಲಕ್ಷಾಂತರ ಜನರ ಧ್ವನಿ ಹಾಗೂ ಹಕ್ಕೊತ್ತಾಯವಿದೆ. ಉತ್ತರ ಕನ್ನಡ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆ ತುರ್ತು ಅಗತ್ಯಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿಮಾರ್ಣವೊಂದೇ ನಮ್ಮ ಮುಂದಿರುವ ದಾರಿಯಾಗಿದೆ, ಫೆ.೧೬ರಂದು ಮಂಡಿಸುವ ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

ದೇಶದ ಅನೇಕ ದೊಡ್ಡ ದೊಡ್ಡ ಯೋಜನೆಗಳಿಗಾಗಿ ತ್ಯಾಗ ಮಾಡಿದ ಜಿಲ್ಲೆಯ ಜನರಿಗೆ ಸರ್ಕಾರ ಸ್ಪಂದಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಮೊದಲು ಕೊಟ್ಟ ಮಾತನ್ನು ಈಡೇರಿಸಲು ವಿಫವಾದರೆ ಜಿಲ್ಲೆಯ ಸಾವಿರಾರು ಯುವಕರನ್ನು ಸೇರಿಸಿ ಸಚಿವರ ಕಚೇರಿ ಎದುರು ಅಮರಣ ಉಪವಾಸ ಸತ್ಯಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ ಕಾಲೇಜು ಹಾಗೂ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಬೇಕಾದ ಔದ್ಯೋಗಿಕ ಪಾರ್ಕ್‌ ಸ್ಥಾಪನೆಗೆ ನಾನು ಮಾಡಿದ ನಾಲ್ಕನೇ ಹೋರಾಟ ಇದಾಗಿದೆ. ಆದರೆ ಇದು ಇಲ್ಲಿಗೇ ನಿಲ್ಲುವುದಿಲ್ಲ. ಇದು ಆಸ್ಪತ್ರೆಗೆ ಅಡಿಗಲ್ಲು ಹಾಕುವ ವರೆಗೂ, ಹಣ ಬಿಡುಗಡೆಯಾಗುವ ವರೆಗೂ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತ, ಅಪಘಾತ, ಕಿಡ್ನಿ, ಲಿವರ್ ಸಮಸ್ಯೆ ಉಂಟಾದಾಗ ನಾವು ದೂರದ ಹುಬ್ಬಳ್ಳಿ ಇಲ್ಲವೇ ಮಂಗಳೂರಿಗೆ ಹೋಗಬೇಕಾಗುತ್ತದೆ. ಅಪಘಾತ, ಹೃದಯಾಘಾತ ಮುಂತಾದ ಸಂದರ್ಭದಲ್ಲಿ ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ಸಿಗದ ಕಾರಣ ಆಸ್ಪತ್ರೆಯ ಹಾದಿಯಲ್ಲಿ ಅನೇಕ ಸಾವುಗಳು ಸಂಭವಿಸಿವೆ. ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿದರೆ ಯಾವುದೇ ಸುಸಜ್ಜಿತ ಆಸ್ಪತ್ರೆಗೆ ಹೋಗಬೇಕಾದರರೂ ಕನಿಷ್ಠ ೪-೫ ಗಂಟೆಗಳ ಪ್ರಯಾಣ ಮಾಡಬೇಕಾಗುವುದು ಅನಿವಾರ್ಯವಾಗಿದೆ. ಹೀಗಾಗಿಯೇ ನಾವು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದೇವೆ. ಜಾಗ ಮಂಜೂರಿಯಾಗಿದೆ. ಆದರೆ ಅದಕ್ಕಿಂತ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಸಣ್ಣ ಕ್ರಮವೂ ಆಗಿಲ್ಲ. ಹೀಗ್ಯಾಕೆ ಎಂದು ನಾವು ಪ್ರಶ್ನೆ ಮಾಡುತ್ತಿದ್ದೇವೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಸರ್ಕಾರವಾಗಲಿ ಉತ್ತರಿಸಬೇಕಾಗುತ್ತದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

ಉತ್ತಮ ವ್ಯಕ್ತಿತ್ವ ಇರುವ ಜಿಲ್ಲೆಯ ಜನರ ಕುರಿತು ಅಪಾರ ಕಾಳಜಿ ಹೊಂದಿರುವ ಮಂಕಾಳ ವೈದ್ಯ ಅವರು ಪ್ರಭಾವಿ ಸಚಿವರಾಗಿದ್ದು ಬಜೆಟ್‌ನಲ್ಲಿ ಹಣನೀಡುವಂತೆ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ಹೇರಬೇಕು, ಆಸ್ಪತ್ರೆ ಕುರಿತು ಸರ್ಕಾರದ ಮೇಲೆ ಒತ್ತಡ ತರುತ್ತಾರೆನ್ನುವ ಭರವಸೆ ಇದೆ ಎಂದರು. ಆಸ್ಪತ್ರೆಗೆ ಹಣ ಬಿಡುಗಡೆ ಮಾಡುವವರೆಗೂ ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದ ಹೇಳಿದರು.
ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಚಿದಾನಂದ ಹರಿಜನ ಮಾತನಾಡಿ, ನಾವು ಶಾಂತ ರೀತಿಯಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಇದನ್ನು ಸರ್ಕಾರ ನಮ್ಮ ದೌರ್ಬಲ್ಯ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀರ್ವ ಸ್ವರೂಪ ತಳೆಯಲಿದೆ ಎಂದು ಹೇಳಿದರು.
ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆ ಬುಧವಾರ ಮಧ್ಯಾಹ್ನ ಭಟ್ಕಳ ನಗರ ಪ್ರವೇಶಿಸಿತು. ನೂರಾರು ಜನರು ಅವರಿಗೆ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಯಲ್ಲಿ ಸಾಗಿದರು. ಪಾದಯಾತ್ರೆಯುದ್ದಕ್ಕೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು ಎಂಬ ಘೋಷಣೆ ಕೂಗುತ್ತ ಸಾಗಿದರು. ಪಾದಯಾತ್ರೆಯಲ್ಲಿ ಪ್ರಮುಖರಾದ ನಾಗರಾಜ ಪಟಗಾರ, ದಯಾನಂದ ನಾಯ್ಕ, ಉಮೇಶ ನಾಯ್ಕ, ಕುಮಾರ ನಾಯ್ಕ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement