ನವದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ಅವರು ರಾಯ್‌ಬರೇಲಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ.
ಬಿಹಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ನಾಮನಿರ್ದೇಶನಗೊಳ್ಳಬಹುದು. ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ಸಾಧ್ಯತೆಯಿರುವ ಇತರ ನಾಯಕರಲ್ಲಿ ಅಭಿಷೇಕ್ ಮನು ಸಿಂಘ್ವಿ ಮತ್ತು ಅಜಯ ಮಾಕೆನ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಯ್ಬರೇಲಿಯಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗಾಗಿ ತಮ್ಮ ಕುಟುಂಬದ ಭದ್ರಕೋಟೆಯ ಕ್ಷೇತ್ರವಾದ ರಾಯ್ಬರೇಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಸ್ಪರ್ಧಿಸಿದರೆ ಇದು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮೊದಲ ಚುನಾವಣೆಯಾಗಲಿದೆ.
77ರ ಹರೆಯದ ಸೋನಿಯಾ ಗಾಂಧಿ ಅವರು ರಾಜ್ಯಸಭೆ ಚುನಾವಣೆಗೆ ಜೈಪುರದಿಂದ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಶ್ರೀಮತಿ ಗಾಂಧಿ ಅವರು ರಾಜ್ಯಸಭೆಗೆ ಹೋಗಲು ಅಷ್ಟೊಂದು ಉತ್ಸುಕರಾಗಿಲ್ಲ ಎಂದು ಅದು ಹೇಳಿದೆ.
ಸೋನಿಯಾ ಅವರು ರಾಜ್ಯಸಭೆಗೆ ಸ್ಪರ್ಧಿಸಿ, ಪ್ರಿಯಾಂಕಾ ಅವರು ಲೋಕಸಭೆಗೆ ಸ್ಪರ್ಧಿಸಿದರೆ ಕಾಂಗ್ರೆಸ್ ಪಾಲಿಗೆ ಇದು ದೊಡ್ಡ ಬದಲಾವಣೆಯಾಗಲಿದೆ. ಸೋನಿಯಾ ಗಾಂಧಿಯವರು 2006 ರಿಂದ ಲೋಕಸಭೆಯಲ್ಲಿ ರಾಯ್ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019 ರಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ತೋರಿದಾಗಲೂ ಮತ್ತು ಪುತ್ರ ರಾಹುಲ್ ಗಾಂಧಿ ಉತ್ತರ ಪ್ರದೇಶದ ಕುಟುಂಬದ ಮತ್ತೊಂದು ಭದ್ರಕೋಟೆ ಕ್ಷೇತ್ರವಾದ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಾಗಲೂ ಸೋನಾ ಗಾಂಧಿ ಅವರು ತಮ್ಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಚುನಾವಣಾ ರಾಜಕೀಯಕ್ಕೆ ಪ್ರವೇಶಕ್ಕೆ ರಾಯ್ಬರೇಲಿ ಸುರಕ್ಷಿತ ಕ್ಷೇತ್ರವೆಂದು ಪರಿಗಣಿಸಲಾಗಿದೆ. 1950 ರ ದಶಕದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಮೊದಲು ಆಕೆಯ ಅಜ್ಜ ಫಿರೋಜ್ ಗಾಂಧಿ ಪ್ರತಿನಿಧಿಸಿದ್ದರು. 2019 ರಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ವಾರಾಣಸಿಯಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯೆ ಸ್ಪರ್ಧೆ ನಡೆಯಬಹುದೆಂದು ಹಲವರು ಊಹಿಸಿದ್ದರು.
ಆದರೆ ಆ ಸಮಯದಲ್ಲಿ ಪಕ್ಷದ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಪೂರ್ವ ಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಂತರ ಇಡೀ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.ಆದರೆ ಆ ಪ್ರಯತ್ನವು 2019 ರಲ್ಲಿ ರಾಜ್ಯದಿಂದ ಬಿಜೆಪಿಯ ಬೃಹತ್ ಗೆಲುವು ಮತ್ತು 2022 ರಲ್ಲಿ ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಂಡ ನಂತರ ಈ ಯೋಜನೆ ನೆಲಕಚ್ಚಿತು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅಂದಿನ ಒಡನಾಡಿ, ಉತ್ತರ ಪ್ರದೇಶದ ಉಸ್ತುವಾರಿಯೂ ಆಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈಗ ಬಿಜೆಪಿಗೆ ಸೇರ್ಪಡೆಗೊಂಡು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ರಾಯ್ಬರೇಲಿಯಲ್ಲಿ ವರ್ಷಗಳಿಂದ ತನ್ನ ತಾಯಿಯ ಪರವಾಗಿ ಕೆಲಸ ಮಾಡುವ ಜನಾಕರ್ಷಣೆ ಮಾಡುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಲೋಕಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ ಕಾಂಗ್ರೆಸ್‌ನ ದೊಡ್ಡ ಭರವಸೆ ಎಂದು ಪರಿಗಣಿಸಲಾಗಿದೆ.
15 ರಾಜ್ಯಗಳ ಒಟ್ಟು 56 ಸ್ಥಾನಗಳಿಗೆ ಫೆಬ್ರವರಿ 27 ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ. ಗಮನಾರ್ಹವಾಗಿ, ಸೋಮವಾರ, ಮಧ್ಯಪ್ರದೇಶ ಕಾಂಗ್ರೆಸ್ ಘಟಕವು ಮಧ್ಯಪ್ರದೇಶದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದೆ. ಅದೇ ರೀತಿ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕಳೆದ ವಾರ ಸೋನಿಯಾ ಗಾಂಧಿ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದ ಖಮ್ಮಂ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಇದೆಲ್ಲ ನೋಡಿದರೆ ಈ ಊಹಾಪೋಹಗಳನ್ನು ಸುಲಭವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ