ಕುಮಟಾ: ಖ್ಯಾತ ತೆರಿಗೆ ಸಲಹೆಗಾರ, ಸಹೃದಯಿ ಸಂಘಟಕ ಎಂ.ಕೆ.ಹೆಗಡೆ ನಿಧನ

ಕುಮಟಾ: ಖ್ಯಾತ ತೆರಿಗೆ ಸಲಹೆಗಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಎಂ.ಕೆ.ಹೆಗಡೆ ಅವರು ಗುರುವಾರ ಅನಾರೋಗ್ಯದಿಂದ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವಕೀಲರು ಹಾಗೂ ತೆರಿಗೆ ಸಲಹೆಗಾರರಾಗಿದ್ದ ಅವರು ಸಹೃದಯಿ ಹಾಗೂ ದಾನಿ ಎಂದೇ ಚಿರಪರಿಚಿತರಾಗಿದ್ದರು. ಎಂ.ಕೆ.ಹೆಗಡೆ ಅವರು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ನಿಮಿತ್ತ ಅವರನ್ನು ಚಾತುರ್ಮಾಸ್ಯ  ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು.
ರಾಮಚಂದ್ರಾಪುರ ಮಠದ ಚಂದವಾರ-ಮಿರ್ಜಾನ್‌ ಸೀಮಾ ಅಧ್ಯಕ್ಷರಾಗಿ, ಕೆಕ್ಕಾರು ಮಠದ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ರಾಮಚಂದ್ರಾಪುರ ಮೂಲ ಮಠ ಅಶೋಕೆ ಸಮಿತಿಯ ಅಧ್ಯಕ್ಷರಾಗಿ, ಉತ್ತರ ಕನ್ನಡ ಪ್ರಾಂತ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಅಲ್ಲದೆ, ಕುಮಟಾ ಲಯನ್ಸ್‌ ಕ್ಲಬ್‌ ಸದಸ್ಯರಾಗಿ, ಕೂಜಳ್ಳಿ ಸಮೀಪದ ಮಲ್ಲಾಪುರದ ಗುರುಪ್ರಸಾದ ಹೈಸ್ಕೂಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಕುಮಟಾದಲ್ಲಿ ಸೌರಭ ಎಂಬ ಸಾಂಸ್ಕೃತಿಕ ಸಂಸ್ಥೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೂಜಳ್ಳಿಯ ಸ್ವರ ಸಂಗಮ ಎಂಬ ಸಂಗೀತ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಪೋಷಕರಾಗಿದ್ದರು. ಅನೇಕ ಸಂಘ-ಸಂಸ್ಥೆಗಳಿಗೆ ಉದಾರವಾಗಿ ಸಹಾಯ ಮಾಡಿದ್ದರು.
ಎಂ.ಕೆ. ಹೆಗಡೆ ಪಾರ್ಥಿವ ಶರೀರವನ್ನು ಮಂಗಳೂರಿನಿಂದ ತರಲಾಗುತ್ತಿದ್ದು, ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಕುಮಟಾ ಕೋರ್ಟ್‌ ಎದುರಿಗಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಮಟಾದ ಹವ್ಯಕ ಮಂಡಲ ತಿಳಿಸಿದೆ.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement