ಲೋಕಸಭೆ ಚುನಾವಣೆ : ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌-ಸಮಾಜವಾದಿ ಪಕ್ಷದ ಮಧ್ಯೆ ಸ್ಥಾನ ಹಂಚಿಕೆ ಅಂತಿಮ

ಲಕ್ನೋ : 2024ರ ಲೋಕಸಭೆ ಚುನಾವಣೆಗೆ ಅಖಿಲೇಶ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದ್ದು,ಈ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ರವಿದಾಸ್ ಮೆಹ್ರೋತ್ರಾ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ವಿವರಗಳನ್ನು ಹಂಚಿಕೊಂಡ ಮೆಹ್ರೋತ್ರಾ ಅವರು, ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆಯಲ್ಲಿ ಸಮಾಜವಾದಿ ಪಕ್ಷ 63 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
“ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ. ಇದು ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುತ್ತದೆ ಮತ್ತು 2024 ರ ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುತ್ತದೆ. ನಾವು ಬಿಜೆಪಿಯೇತರ ಮತಗಳು ಒಡೆದು ಹೋಗುವುದನ್ನು ತಡೆಯಲು ಯತ್ನಿಸಿದ್ದೇವೆ” ಮೆಹ್ರೋತ್ರಾ   ತಿಳಿಸಿದ್ದಾರೆ.

“ಸಮಾಜವಾದಿ ಪಕ್ಷ 63 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿವೆ. ನಾವು ಉತ್ತರ ಪ್ರದೇಶದಲ್ಲಿ ಎಲ್ಲಾ 80 ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ” ಎಂದು ಹೇಳಿದ್ದಾರೆ.
ಅಖಿಲೇಶ ಯಾದವ್ ಸಹ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಖಚಿತಪಡಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ. ಎರಡು ಪಕ್ಷಗಳ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಈ ಬಗ್ಗೆ ಎಲ್ಲವನ್ನೂ ಸ್ಪಷ್ಟಪಡಿಸಲಾಗುವುದು ಎಂದು ಒತ್ತಿ ಹೇಳಿದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಕಾಂಗ್ರೆಸ್-ಸಮಾಜವಾದಿ ಮೈತ್ರಿಯು ಅಖಿಲೇಶ ಯಾದವ್ ಕಾಂಗ್ರೆಸ್ಸಿಗೆ ಒಂದು ರೀತಿಯ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಬಂದಿದೆ. ‘ಸಂಪೂರ್ಣ ಮಾತುಕತೆಗಳು ಅಥವಾ ಮೈತ್ರಿ ಅಂತಿಮವಾಗುವವರೆಗೆ ನಾನು ರಾಹುಲ್ ಗಾಂಧಿಯವರ ‘ಭಾರತ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು.
ನಂತರ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸೋನಿಯಾ ಗಾಂಧಿ ಈ ಬಗ್ಗೆ ಕ್ರಮಕ್ಕೆ ಮುಂದಾದರು. ಇಬ್ಬರೂ ನೇರವಾಗಿ ಅಖಿಲೇಶ ಯಾದವ್‌ ಅವರನ್ನು ಭೇಟಿ ಮಾಡಿ, ನಂತರ ರಾಹುಲ್‌ ಗಾಂಧಿ ಮತ್ತು ಇತರ ಹಿರಿಯ ನಾಯಕರ ಜತೆ ಮಾತುಕತೆ ನಡೆಸಿ ಸ್ಥಾನಗಳನ್ನು ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎನ್‌ಡಿಟಿವಿ ವರದಿ ಮಾಡಿದೆ.
2014 ಮತ್ತು 2019 ರ ಚುನಾವಣೆಯಲ್ಲಿ ಪಕ್ಷದ ಒಟ್ಟಾರೆ ಕಳಪೆ ಪ್ರದರ್ಶನವನ್ನು ಗಮನಿಸಿದರೆ, ರಾಜ್ಯ ನಾಯಕರ ಕೆಲವು ಬೇಡಿಕೆಗಳು “ಅವಾಸ್ತವಿಕ” ಎಂದು ರಾಜ್ಯ ನಾಯಕರಿಗೆ ಅರ್ಥಮಾಡಿಸಿದವರಲ್ಲಿ ಸೋನಿಯಾ ಗಾಂಧಿ ಅವರು ಪ್ರಮುಖರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement