ದಂಡ ಸಂಹಿತೆ ಬದಲಿಸುವ ನೂತನ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ಜಾರಿಗೆ

ನವದೆಹಲಿ : ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಮತ್ತು ಈ ಕಾನೂನುಗಳು ದೇಶದ ವಸಾಹತುಶಾಹಿ ಯುಗದ ಶಾಸನಗಳನ್ನು ಬದಲಿಸುತ್ತವೆ ಎಂದು ಸರ್ಕಾರ ಶನಿವಾರ ಪ್ರಕಟಿಸಿದೆ.
ಭಾರತೀಯ ನ್ಯಾಯ (ಎರಡನೇ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆಯು 1860ರ ಭಾರತೀಯ ದಂಡ ಸಂಹಿತೆ, 1973 ರ ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸುತ್ತದೆ. ಮೂರು ಕಾನೂನುಗಳನ್ನು ಸಂಸತ್ತು ಅಂಗೀಕರಿಸಿತು ಮತ್ತು ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಕಳೆದ ಡಿಸೆಂಬರ್‌ನಲ್ಲಿ ಅದಕ್ಕೆ ಅನುಮೋದನೆ ನೀಡಿದ್ದಾರೆ.

ಹೊಸ ಕಾನೂನುಗಳು ದೇಶದ ಜನರನ್ನು ವಸಾಹತು ಕಾಲದ ಮನಃಸ್ಥಿತಿಯಿಂದ ಮುಕ್ತಗೊಳಿಸಲಿವೆ. ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಹಿತರಕ್ಷಣೆಗೆ ಒತ್ತು ನೀಡುತ್ತವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವರ್ಷ ಸಂಸತ್ತಿನಲ್ಲಿ ಮಂಡಿಸುವಾಗ ಹೇಳಿದ್ದರು. ಹೊಸ ಕಾನೂನುಗಳು ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸುತ್ತವೆ ಮತ್ತು ತನಿಖೆ, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಅವರು ಹೇಳಿದ್ದರು.
ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳು, ಸಂಸದರು, ಶಾಸಕರು, ಐಪಿಎಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಳು ಸೇರಿದಂತೆ ಒಟ್ಟು 3,200ಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಈ ಕಾನೂನುಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಸಂಘಟಿತ ಅಪರಾಧ, ಭಯೋತ್ಪಾದಕ ಕೃತ್ಯಗಳು, ಗುಂಪು ಹತ್ಯೆ, ಹಿಟ್ ಅಂಡ್ ರನ್, ವಂಚನೆಯ ಮೂಲಕ ಮಹಿಳೆಯ ಲೈಂಗಿಕ ಶೋಷಣೆ, ಕಿತ್ತುಕೊಳ್ಳುವಿಕೆ, ಭಾರತದ ಹೊರಗೆ ಕುಮ್ಮಕ್ಕು ನೀಡುವುದು, ಭಾರತದ ಸಾರ್ವಭೌಮತೆ, ಸಮಗ್ರತೆ ಮತ್ತು ಏಕತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳು, ಮತ್ತು ಸುಳ್ಳು ಅಥವಾ ನಕಲಿ ಸುದ್ದಿಗಳ ಪ್ರಕಟಣೆ ಸೇರಿದಂತೆ 20 ಹೊಸ ಅಪರಾಧಗಳನ್ನು ನ್ಯಾಯ ಸಂಹಿತಾ ಒಳಗೊಂಡಿದೆ.
ಹೊಸ ಕಾನೂನುಗಳು ಭಯೋತ್ಪಾದನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತವೆ ಮತ್ತು ಗುಂಪು ಹತ್ಯೆ ಮತ್ತು ಅಪ್ರಾಪ್ತ ವಯಸ್ಕರ ಅತ್ಯಾಚಾರಕ್ಕೆ ಮರಣದಂಡನೆ ವರೆಗೆ ಶಿಕ್ಷೆಗೆ ಅವಕಾಶವಿದೆ.
ದೇಶದ್ರೋಹ ಕಾನೂನನ್ನು ರದ್ದುಗೊಳಿಸಲಾಗಿದೆ ಮತ್ತು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳನ್ನು ಅಪರಾಧೀಕರಿಸುವ ಹೊಸ ವಿಭಾಗದೊಂದಿಗೆ ಬದಲಾಯಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement