ಹಾಸನ: ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರು ಆನೆ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕರ್ನಾಟಕದ ಹಾಸನ ಜಿಲ್ಲೆಯ ಕೆಸಗುಳಿ ಗ್ರಾಮದಲ್ಲಿ ಮಾರ್ಚ್ 3 ರಂದು ಈ ಘಟನೆ ನಡೆದಿದೆ.
ಘಟನೆಯ ವೀಡಿಯೊದಲ್ಲಿ ಆನೆಯೊಂದು ಜಮೀನಿಗೆ ನುಗ್ಗಿ ಅಡಿಕೆ ತೋಟದ ಕೆಲಸದಲ್ಲಿ ನಿರತರಾಗಿದ್ದ ರೈತ ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಲು ಯತ್ನಿಸುತ್ತಿರುವುದು ಕಂಡು ಬಂದಿದೆ. ರೈತ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಕಾಡಾನೆಯೂ ಬೆನ್ನಟ್ಟಿ ಬಂದಿದೆ. ಬೃಹತ್ ಆನೆ ವೇಗವಾಗಿ ಬೆನ್ನಟ್ಟಿದೆ. ಆನೆ ಅಟ್ಟಿಸಿಕೊಂಡು ಬರುವಾಗ ಅಡ್ಡವಾಗಿ ಓಡಬೇಂತೆ, ಯಾಕೆಂದರೆ ದೇಹ ದೊಡ್ಡದಿರುವುದಕ್ಕೆ ಒಮ್ಮೆಗೇ ತಿರುಗಿ ಅಟ್ಟಿಸಿಕೊಂಡು ಬರುವಾಗ ಅದರ ವೇಗ ಕಡಿಮೆಯಾಗುತ್ತದಂತೆ., ಇಲ್ಲಿಯೂ ವ್ಯಕ್ತಿ ಅದನ್ನೇ ಮಾಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೇನು ಸೊಂಡಲಿನಿಂದ ಆ ವ್ಯಕ್ತಿಯನ್ನು ಹಿಡಿಯಬೇಕು ಎಂದು ಆನೆ ದಾಳಿ ಮಾಡಿದಾಗ ವ್ಯಕ್ತಿ ಆನೆಯ ಅಡ್ಡಕ್ಕೆ ಓಡಿ ಜೀವ ಉಳಿಸಿಕೊಂಡಿದ್ದಾರೆ.
ಅಲ್ಲಿಂದ ಓಡಿದ ಅವರು ಮನೆಗೆ ತಲುಪಿದರೆ ಮನೆ ಬೀಗ ಹಾಕಿರುತ್ತದೆ. ಹೀಗಾಗಿ ವ್ಯಕ್ತಿ ತನ್ನನ್ನು ರಕ್ಷಿಕೊಳ್ಳಲು ಮನೆಮುಂದೆ ನಿಂತ ಕಾರಿನಡಿ ತೆವಳಿ ತೂರಿಕೊಳ್ಳುತ್ತಾರೆ. ಮತ್ತೊಬ್ಬ ವ್ಯಕ್ತಿಯೂ ಆನೆಯಿಂದ ತಪ್ಪಿಸಿಕೊಳ್ಳಲು ಮತ್ತೊಂದು ಬದಿಯಿಂದ ಓಡಿ ಬರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಅವರು ಮನೆಗೆ ಬಂದು ವರಾಂಡದಲ್ಲಿ ನೋಡುತ್ತಾರೆ, ಮತ್ತೊಬ್ಬ ವ್ಯಕ್ತಿಗೆ ಹುಡುಕುವುದು ಕಂಡುಬರುತ್ತದೆ.
ಸ್ವಲ್ಪ ಹೊತ್ತಿನ ನಂತರ ಕಾರಿನಡಿ ಅಡಗಿದ್ದ ವ್ಯಕ್ತಿ ಹೊರಬಂದು ಆನೆ ಹೋಗಿದೆಯಾ ಎಂದು ನೋಡುತ್ತಾರೆ. ಆ ಬಳಿಕ ಇಬ್ಬರು ಮನೆಯ ಬೀಗ ತೆರೆಯುವುದು ಕಂಡುಬರುತ್ತದೆ.
ದೈತ್ಯಾಕಾರದ ಈ ಆನೆಯನ್ನು ಕರಡಿ ಕಾಡಾನೆ ಎಂದು ಹೇಳಲಾಗುತ್ತಿದೆ. ಹದಿನೈದು ದಿನಗಳ ಹಿಂದೆಯಷ್ಟೇ ಆನೆಯೊಂದು ಹೆಬ್ಬನಹಳ್ಳಿಯಲ್ಲಿ ಮೂವರ ಮೇಲೆ ದಾಳಿ ಮಾಡಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ