ಇ.ಡಿ.ಸಮನ್ಸ್‌ಗೆ ಡೋಂಟ್‌ ಕೇರ್‌ : ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್ ಜಾರಿ

ನವದೆಹಲಿ : ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಪದೇಪದೇ ಸಮನ್ಸ್ ನೀಡಿದರೂ ಸ್ಪಂದಿಸದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಈಗ ಸ್ವತಃ ದೆಹಲಿ ನ್ಯಾಯಾಲಯದಿಂದಲೇ ಸಮನ್ಸ್ ಜಾರಿ ಮಾಡಲಾಗಿದೆ.
ಮಾರ್ಚ್ 16ಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಕೋರ್ಟ್ ಸೂಚಿಸಿದೆ. ತಾನು 8 ಬಾರಿ ಸಮನ್ಸ್ ನೀಡಿದರೂ ಕೇಜ್ರಿವಾಲ್ ಸ್ಪಂದಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ.

ದೆಹಲಿ ಸರ್ಕಾರದ ಮದ್ಯ ನೀತಿ (ಈಗ ರದ್ದಾಗಿದೆ) ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಎಂಟು ಬಾರಿ ಸಮನ್ಸ್ ನೀಡಿದೆ. ಯಾವುದಕ್ಕೂ ಅವರು ಸ್ಪಂದಿಸಿಲ್ಲ. ಮಾರ್ಚ್ 4ಕ್ಕೆ ಕೊನೆಯದಾಗಿ ಸಮನ್ಸ್ ನೀಡಲಾಗಿತ್ತು. ಮೊದಲ ಮೂರು ಸಮನ್ಸ್‍ಗೆ ದೆಹಲಿ ಮುಖ್ಯಮಂತ್ರಿ ಸ್ಪಂದಿಸದೇ ಇದ್ದಾಗಲೇ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಇಡಿ ದೂರು ನೀಡಿತ್ತು. ನಂತರದ ಐದು ಸಮನ್ಸ್‌ ಗಳಿಗೂ ಅವರು ಸ್ಪಂದಿಸದ ಕಾರಣ ಇ.ಡಿ. ಮತ್ತೊಮ್ಮೆ ದೂರು ನೀಡಿದ ಹಿನ್ನೆಲೆಯಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮಾರ್ಚ್ 16ಕ್ಕೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ಕೇಂದ್ರ ಸರ್ಕಾರ ಇಡಿ ಇತ್ಯಾದಿ ಸಂಸ್ಥೆಗಳ ಮೂಲಕ ಎದುರಾಳಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ತನ್ನನ್ನು ವಿಚಾರಣೆ ನಡೆಸುವುದಾದರೆ ತಾನು ಸಿದ್ಧ ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಿದ್ದಾರೆ. ಆದರೆ, ಆ ಪದ್ಧತಿ ಇಲ್ಲ. ಭೌತಿಕವಾಗಿ ತಾವು ವಿಚಾರಣೆಗೆ ಹಾಜರಾಗಬೇಕು ಎಂಬುದು ಇ.ಡಿ. ಅಧಿಕಾರಿಗಳ ವಾದ. ಈ ಪ್ರಕರಣದಲ್ಲಿ ಈ ಹಿಂದೆ ದೆಹಲಿಯ ಮಾಜಿ ಡಿಸಿಎಂ ಮನೀಶ ಸಿಸೋಡಿಯಾ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಇಡಿ ವಿಚಾರಣೆ ನಡೆಸಿತ್ತು.

ಅದಾದ ಬಳಿಕ ಇಬ್ಬರನ್ನೂ ಅದು ಬಂಧಿಸಿದೆ. ವಿಚಾರಣೆ ನೆಪದಲ್ಲಿ ಇಡಿ ತನ್ನನ್ನೂ ಜೈಲಿಗೆ ತಳ್ಳಬಹುದು ಎಂಬುದು ಕೇಜ್ರಿವಾಲ್ ಅವರಿಗೆ ಇರುವ ಭಯ.
ಯಾರು ಬಿಜೆಪಿಗೆ ಸೇರಲು ನಿರಾಕರಿಸುತ್ತಾರೋ ಅವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಸತ್ಯೇಂದರ್ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಈಗ ಬಿಜೆಪಿ ಸೇರಿದರೆ ನಾಳೆಯೇ ಅವರಿಗೆ ಜಾಮೀನು ಸಿಗುತ್ತದೆ. ನಾನು ಕೂಡ ಇವತ್ತು ಬಿಜೆಪಿ ಸೇರಿದರೆ ಇಡಿಯಿಂದ ಸಮನ್ಸ್ ಬರುವುದು ನಿಂತುಹೋಗುತ್ತದೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement