ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಎನ್ಐಎಯಿಂದ ಶಂಕಿತನ ಮತ್ತೆರಡು ವೀಡಿಯೊ ಬಿಡುಗಡೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಘಟನೆ ನಡೆದು 7 ದಿನಗಳಾದರೂ ಬಾಂಬ್‌ ಇರಿಸಿದ್ದ ಶಂಕಿತ ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಶಂಕಿತನ ಮತ್ತೆರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.
ಒಂದರಲ್ಲಿ ಶಂಕಿತ ಬಾಂಬರ್ ಬಿಎಂಟಿಸಿ ಬಸ್ ಹತ್ತಿ, ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವುದು ಕಂಡುಬರುತ್ತದೆ. ಮೊದಲ ವೀಡಿಯೊದಲ್ಲಿ ಈತ ಬಸ್‌ ಏರಿದ ನಂತರ ಸಿಸಿಟಿವಿ ಕ್ಯಾಮರಾಕ್ಕೆ ಬೆನ್ನುಹಾಕಿ ಸೀಟ್‌ನತ್ತ ಹೋಗುತ್ತಿರುವುದು ಸೆರೆಯಾಗಿದೆ.

ಈತ ಮೊದಲು ಬಸ್ಸಿನ ಮಧ್ಯಬಾಗದ ಸೀಟಿನಲ್ಲಿ ಕುಳಿತುಕೊಂಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಎದ್ದು ಬಸ್ಸಿನ ಹಿಂಬದಿಯ ಸೀಟಿಗೆ ಹೋಗಿ ಕುಳಿತುಕೊಳ್ಳುವುದು ಕಂಡುಬಂದಿದೆ. ಮತ್ತೊಂದು ವೀಡಿಯೋದಲ್ಲಿ ಬೇರೆ ಬಟ್ಟೆ ಧರಿಸಿ ಬಂದಂತೆ ಕಾಣುತ್ತಿದ್ದು, ಕ್ಯಾಪ್ ಹಾಗೂ ಮಾಸ್ಕ್ ತೆಗೆದು, ಪ್ಲಾಟ್‌ಫಾರ್ಮಿನಲ್ಲಿ ಆ ಕಡೆಯಿಂದ ಈ ಕಡೆ ಓಡಾಡಿದ್ದು ಕಂಡು ಬಂದಿದೆ.

ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಎನ್‌ಐಎ, ಈತನ ಬಗ್ಗೆ ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ಹೇಳಿದೆ. ಶಂಕಿತ ಬಾಂಬರ್​ನ ಸುಳಿವು ಸಿಕ್ಕರೆ 080 29510900, 8904241100 ಹಾಗೂ ಇ–ಮೇಲ್‌ ವಿಳಾಸ [email protected]ಗೆ ಮಾಹಿತಿ ನೀಡಿ ‌ಎಂದು ಮನವಿ ಮಾಡಿದ್ದಾರೆ.

ಈ ಪ್ರಕರಣ ಸಂಬಂಧ ಶಂಕಿತ ಉಗ್ರ ಬಳ್ಳಾರಿಯಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಇದಲ್ಲದೆ ಮುಂಬೈ ಹಾಗೂ ದೆಹಲಿಯ ಇಬ್ಬರು ಶಂಕಿತ ಉಗ್ರರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ವಶಕ್ಕೆ ಪಡೆದಿರುವ ಶಂಕಿತ ಉಗ್ರರು ಇಸಿಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದು, ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್ಐಎ ಅಧಿಕಾರಿಗಳು 2023ರ ಡಿಸೆಂಬರ್ 18ರಂದು ಇವರನ್ನು ಬಂಧಿಸಿದ್ದರು.

ಪ್ರಮುಖ ಸುದ್ದಿ :-   ಮೈಸೂರು: ಮಲಗಿದ್ದ ಸ್ಥಿತಿಯಲ್ಲೇ ಒಂದೇ ಕುಟುಂಬದ ನಾಲ್ವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement