ಚಂದಾವರ : ಮಾರ್ಚ್‌ 16ರಿಂದ ಹನುಮಂತ ದೇವರ ಮೂಲ ಮೂರ್ತಿ ಪುನರ್ ಪ್ರತಿಷ್ಠಾ ಮಹೋತ್ಸವ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಸುಪ್ರಸಿದ್ಧ ಹನುಮಂತ ದೇವರ ಮೂಲ ಮೂರ್ತಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಮಾರ್ಚ್ 16ರಿಂದ 18ರ ವರೆಗೆ ನಡೆಯಲಿದೆ.
ಹೊನ್ನಾವರ, ಕುಮಟಾ ತಾಲೂಕಿನ ಅನೇಕ ಗ್ರಾಮಗಳು ಸೇರಿದಂತೆ ಚಂದಾವರ ಸೀಮೆಯಷ್ಟೇ ಅಲ್ಲದೆ ಉತ್ತರ ಕನ್ನಡ ಜಿಲ್ಲೆ ಹಾಗೂ ನಾಡಿನ ವಿವಿಧೆಡೆಯ ಭಕ್ತರ ಆರಾಧ್ಯ ದೈವವಾಗಿರುವ ಚಂದಾವರದ ಹನುಮಂತ ದೇವರ ಮೂಲ ಮೂರ್ತಿಯ ಪುನರ್ ಪ್ರತಿಷ್ಠೆ ನಡೆಯಲಿದ್ದು, ಪಂಚಲೋಹದಿಂದ ತಯಾರಿಸಿದ ವಿಗ್ರಹ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.
ಚಂದಾವರ ಸೀಮೆಯಷ್ಟೇ ಅಲ್ಲದೆ ಜಿಲ್ಲೆಯ ಬೇರೆ ಬೇರೆ ಸೀಮೆಯ ನೂರಾರು ಗ್ರಾಮದ ಲಕ್ಷಾಂತರ ಭಕ್ತರು ಇಲ್ಲಿಯ ಹನುಮಂತ ದೇವರಿಗೆ ನಡೆದುಕೊಳ್ಳುತ್ತಾರೆ. ಪ್ರತೀ ವರ್ಷ ಬೇರೆ ಬೇರೆ ಹಳ್ಳಿಗಳಿಗೆ ಹನುಮಂತ ದೇವರ ಪಲ್ಲಕ್ಕಿ ಸವಾರಿಗೆ ತೆರಳುತ್ತದೆ. ಆ ಸಮಯದಲ್ಲಿ ಆಯಾ ಊರಿನ ದೇವಸ್ಥಾನ, ಬೇರೆಬೇರೆ ಸ್ಥಳಗಳಲ್ಲಿ ಪಲ್ಲಕ್ಕಿ ಇಟ್ಟು ಊರಿನವರೇ ಪೂಜೆ ನೆರವೇರಿಸುತ್ತಾರೆ.

ಕಾರ್ಯಕ್ರಮಗಳು….
ಪ್ರತಿಷ್ಠಾ ಕಾರ್ಯವು ಶ್ರೀ ಕ್ಷೇತ್ರ ಗೊಕರ್ಣದ ಆಗಮ ಶಾಸ್ತ್ರ ಪಂಡಿತರಾದ ವೇದಮೂರ್ತಿ ಕೃಷ್ಣ ಭಟ್ಟ ಷಡಕ್ಷರಿ ನೇತೃತ್ವದಲ್ಲಿ ನಡೆಯಲಿದೆ. ಮಾ.16 ರಂದು ಬೆಳಿಗ್ಗೆ ಸಾರ್ವಜನಿಕ ಪ್ರಾರ್ಥನೆ, ಗಣೇಶ ಪೂಜೆ, ಯತ್ವಿಗ್ವರಣ, ಕೌತುಕಬಂಧನ, ಮೂರ್ತಿಪರಿಗ್ರಹ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಸಭಾಂಗಣದಲ್ಲಿ ಬೆಳಿಗ್ಗೆ 10:30ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3.00 ರಿಂದ ರಾಮತಾರಕ ಮಂತ್ರ ಪಠಣ, 3:30ಕ್ಕೆ ಧರ್ಮ ಸಭೆ ನಡೆಯಲಿದೆ. ಸಿದ್ದಾಪುರ ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತೀ ಶ್ರೀಗಳಿಂದ ಹನುಮಂತ ದೇವರ ಮಹಿಮೆ ಕುರಿತು ಪ್ರವಚನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಪಾಲ್ಗೊಳ್ಳಲಿದ್ದಾರೆ. ಶಾಸಕರಾದ ಆರ್. ವಿ. ದೇಶಪಾಂಡೆ, ದಿನಕರ ಕೆ. ಶೆಟ್ಟಿ, ಕೆನರಾ ಬ್ಯಾಂಕಿನ ಮಣಿಪಾಲದ ಮಹಾ ಪ್ರಬಂಧಕ ಮಂಜುನಾಥ ಜಿ. ಪಂಡಿತ ಹೆಗಡೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಂಜೆ 5.00 ಗಂಟೆಯಿಂದ ಕೋಲಾಟ, ಜನಪದ ನೃತ್ಯ, ಭರತನಾಟ್ಯ, ಹಾಲಕ್ಕಿ ಜಾನಪದ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6:15 ರಿಂದ ರಾತ್ರಿ 8:15 ಗಂಟೆಯವರೆಗೆ ಪದ್ಮಶ್ರೀ ಪುರಸ್ಕೃತ ಧಾರವಾಡದ ಪಂಡಿತ ವೆಂಕಟೇಶಕುಮಾರ ಅವರಿಂದ ಸಂಗೀತ ಹಾಗೂ ಭಜನೆ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಹೊಸಾಡು ಕಲಾ ತಪಸ್ವಿ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

ಮಾ.17 ರಂದು ಭಾನುವಾರ ಪ್ರತಿಷ್ಠಾ ಹೋಮಗಳು ಬೆಳಿಗ್ಗೆ 10:15 ಕ್ಕೆ ಮೂಲ ಮೂರ್ತಿಯ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಬೆಳಿಗ್ಗೆ 10:30ರಿಂದ ಭಜನಾ ಕಾರ್ಯಕ್ರಮ, ಅಪರಾಹ್ನ 3ರಿಂದ ರಾಮತಾರಕ ಮಂತ್ರ ಪಠಣ, 3:30ಕ್ಕೆ ಧರ್ಮಸಭೆ, ಪ್ರವಚನಕಾರರಾಗಿ ನಾರಾಯಣ ಯಾಜಿ ಸಾಲೆಬೈಲು ಆಗಮಿಸಲಿದ್ದಾರೆ. ಸಂಜೆ 5ರಿಂದ ಹರಿದಾಸ ಡಿ.ಆರ್.ಹೆಗಡೆ ಅವರಿಂದ ಹರಿಕಥಾ ಕಾರ್ಯಕ್ರಮ, ಭರತನಾಟ್ಯ, ಹಾಲಕ್ಕಿ ಜಾನಪದ ವೈಭವ ನಡೆಯಲಿದ್ದು ರಾತ್ರಿ 8 ರಿಂದ 10ರ ವರೆಗೆ ಪುತ್ತೂರು ನರಸಿಂಹ ನಾಯಕ ಅವರಿಂದ ಭಜನೆ ಲಹರಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10:15 ಕ್ಕೆ “ದೇವಿ ಮಹಾತ್ಮೆ” ಯಕ್ಷಗಾನವಿದೆ.

ಮಾ.18 ರಂದು ಕುಂಬಾಭಿಷೇಕ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 3ರಿಂದ ರಾಮತಾರಕ ಮಂತ್ರ ಪಠಣ, 3:30ಕ್ಕೆ ಧರ್ಮಸಭೆ ನಡೆಯಲಿದೆ. ಕೃಷ್ಣ ಬಾಬಾ ಪೈ ಗೌರವ ಉಪಸ್ಥಿತಿ; ಧರ್ಮ ಮತ್ತು ದೇವಸ್ಥಾನದ ಕುರಿತು ಉಪನ್ಯಾಸ, ಸಂಜೆ 7ರಿಂದ ಕೋಲಾಟ, ಜನಪದ ನೃತ್ಯ, ಭರತನಾಟ್ಯ, ಹಾಲಕ್ಕಿ ಜಾನಪದ ವೈಭವ, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 12 ಗಂಟೆಯಿಂದ ಕುಮಟಾದ ರಾಮ ಪ್ರಸಾದ ಯಕ್ಷಗಾನದ ಬಳಗದ ವತಿಯಿಂದ ರಾಮಾಂಜನೇಯ ಯಕ್ಷಗಾನ ನಡೆಯಲಿದೆ.
ಮೂರು ದಿನಗಳ ಕಾರ್ಯಕ್ರಮದ ನಿಮಿತ್ತ 10 ಎಕರೆ ಪ್ರದೇಶದ ಪಾರ್ಕಿಂಗ್ ವ್ಯವಸ್ಥೆ, 5 ಎಕರೆ ಜಾಗದಲ್ಲಿ ಊಟದ ವ್ಯವಸ್ಥೆ, ಸುಮಾರು 8-10 ಸಾವಿರ ಜನರು ಕುಳಿತುಕೊಳ್ಳುವ ಸಭಾಂಗಣ ವ್ಯವಸ್ಥೆ ಮಾಡಲಾಗಿದೆ. ಮಾ.18 ರಂದು ಮಹಾ ಅನ್ನ ಸಂತರ್ಪಣೆ ನಡೆಯಲಿದೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement