ಚೆನ್ನೈ: ಲೋಕಸಭೆ ಚುನಾವಣೆಗೆ ಮುನ್ನ, ತಮಿಳು ಹಿರಿಯ ನಟ ಆರ್. ಶರತಕುಮಾರ ಅವರು ಮಂಗಳವಾರ (ಮಾರ್ಚ್ 12) ತಮ್ಮ ಅಖಿಲ ಭಾರತೀಯ ಸಮತುವ ಮಕ್ಕಳ್ ಕಚ್ಚಿ (AISMK) ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ.
ಎಐಎಸ್‌ಎಂಕೆ (AISMK) ಪದಾಧಿಕಾರಿಗಳು ಮತ್ತು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಸಮ್ಮುಖದಲ್ಲಿ ಶರತಕುಮಾರ ತಮ್ಮ ಪಕ್ಷವನ್ನು ಬಿಜೆಪಿ ಪಕ್ಷದೊಂದಿಗೆ ವಿಲೀನಗೊಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಮೇಲೆ ವಿಶ್ವಾಸ ಇಟ್ಟಿರುವ ಾವರು, ಚೆನ್ನೈನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, “ಮೋದಿ ಅವರು ಏಕತೆಯನ್ನು ಬೆಳೆಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಪೋಷಿಸುವ ಕಡೆಗೆ ರಾಷ್ಟ್ರವನ್ನು ಮುಂದೆಯೂ ಮುನ್ನಡೆಲಿದ್ದಾರೆ” ಎಂದು ಹೇಳಿದರು. 2026 ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆಯ ನಂತರ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುವಂತೆ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
ಡಿಎಂಕೆಯಲ್ಲಿದ್ದ ನಂತರ ಅವರು ಆ ಪಕ್ಷವನ್ನು ತೊರೆದು ಎಐಎಡಿಎಂಕೆಗೆ ಸೇರಿದರು ಮತ್ತು ಅಂತಿಮವಾಗಿ 2007 ರಲ್ಲಿ ಎಐಎಸ್‌ಎಂಕೆ ಪಕ್ಷ ಸ್ಥಾಪಿಸಿದರು.
ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖ್ಯಸ್ಥ ಟಿಟಿವಿ ದಿನಕರನ್ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಮ್ಮ ಪಕ್ಷದ ಬೇಷರತ್ ಬೆಂಬಲ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದಿನಕರನ್, ಬಿಜೆಪಿ ಜೊತೆಗಿನ ಮೈತ್ರಿ ಖಚಿತವಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಮತ್ತು ಬಿಜೆಪಿ ನಾಯಕ ಕಿಶನ್ ರೆಡ್ಡಿ ಅವರು ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಎಎಂಎಂಕೆ ಬೇಷರತ್ ಬೆಂಬಲವನ್ನು ಅವರಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು. ಚೆನ್ನೈನಿಂದ ಹೊರಗಿರುವ ಕಾರಣ ಸೋಮವಾರ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ದಿನಕರನ್ ಹೇಳಿದ್ದಾರೆ.
ಕಳೆದ ಆರು ತಿಂಗಳಿನಿಂದ ಬಿಜೆಪಿ ನಾಯಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಈಗ ಸುಮಾರು ಮೂರು ತಿಂಗಳಿಂದ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರನೇ ಬಾರಿ ಅಧಿಕಾರ ನೀಡುವುದು ಖಚಿತವಾಗಿದ್ದರೂ, ತಮಿಳುನಾಡಿನಲ್ಲಿ ಬಿಜೆಪಿಗೆ ಗೆಲುವು ಸಾಧಿಸಲು ತಮ್ಮ ಪಕ್ಷವಾದ ಎಎಂಎಂಕೆ ‘ಅಳಿಲು’ ತರಹ ಕೊಡುಗೆ ನೀಡಲಿದೆ. ಸೀಟು ಹಂಚಿಕೆ ಕುರಿತು ತಮ್ಮ ಪಕ್ಷದ ಬೇಡಿಕೆಗಳು ಸಮಂಜಸವಾಗಿರುತ್ತವೆ. ತಮ್ಮ ಪಕ್ಷಕ್ಕೆ ಎಷ್ಟು ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗುವುದು ಮತ್ತು ಅವರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಪ್ರಶ್ನೆಗೆ ಉತ್ತರಿಸಿದ ಅವರು, ನೀತಿಗಳು ಮತ್ತು ಸಿದ್ಧಾಂತಗಳು ಹೊಂದಾಣಿಕೆಯಾದರೆ, ಪ್ರತ್ಯೇಕ ರಾಜಕೀಯ ಪಕ್ಷಗಳ ಉಪಸ್ಥಿತಿಯ ಅಗತ್ಯವಿಲ್ಲ ಮತ್ತು ಪಕ್ಷಗಳ ನಡುವಿನ ಒಪಪಂದವು ಚುನಾವಣಾ ಉದ್ದೇಶಗಳಿಗೆ ಸೀಮಿತವಾಗಿದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ