ಲೋಕಸಭೆ ಚುನಾವಣೆ: ಬಿಡುಗಡೆಯಾದ ಬಿಜೆಪಿ 267 ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ 24%ರಷ್ಟು ಹಾಲಿ ಸಂಸದರಿಗೆ ಕೈತಪ್ಪಿದ ಟಿಕೆಟ್‌…!

ನವದೆಹಲಿ: ಬಿಜೆಪಿ ಇದುವರೆಗೆ ಬಿಡುಗಡೆ ಮಾಡಿರುವ ಎರಡು ಪಟ್ಟಿಗಳಲ್ಲಿ ಲೋಕಸಭೆ ಚುನಾವಣೆಗೆ ಪಕ್ಷವು 267 ಅಭ್ಯರ್ಥಿಗಳನ್ನು ಹೆಸರಿಸಿದೆ. ಅದರಲ್ಲಿ ಸುಮಾರು 24%ರಷ್ಟು ಹಾಲಿ ಸಂಸದರಿಗೆ ಟಿಕೆಟ್‌ ನೀಡಿಲ್ಲ ಎಂದು ವರದಿಯೊಂದು ಹೇಳಿದೆ. ಅವರ ಕ್ಷೇತ್ರದಲ್ಲಿ ಸಂಭಾವ್ಯ ವಿರೋಧಿ ಅಲೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರವನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಪಕ್ಷವು ತಳಮಟ್ಟದಿಂದ ಪಡೆದ ಪ್ರತಿಕ್ರಿಯೆಯನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನೇ ಸ್ವಂತವಾಗಿ 370 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟಿಕೊಂಡಿರುವ ಬಿಜೆಪಿಯು ಅಭ್ಯರ್ಥಿಗಳ ಆಯ್ಕೆಯನ್ನು ಸಹ ಪ್ರಮುಖ ಮಾನದಂಡವಾಗಿ ಪರಿಗಣಿಸಿದೆ. ಉದ್ದೇಶಿತ 370 ಸ್ಥಾನಗಳ ಗುರಿ ತಲುಪಲು ಬಿಜೆಪಿ 2019 ರಲ್ಲಿ ಗೆದ್ದಿದ್ದಕ್ಕಿಂತ 67 ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕಿದೆ.
ಮಾರ್ಚ್ 2 ರಂದು ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿರುವ ಬಿಜೆಪಿ ಇದೇವೇಳೆ ಪ್ರಜ್ಞಾ ಠಾಕೂರ್, ರಮೇಶ್ ಬಿಧುರಿ ಮತ್ತು ಪರ್ವೇಶ್ ವರ್ಮಾ ಸೇರಿದಂತೆ ಹಾಲಿ 33 ಸಂಸದರಿಗೆ ಟಿಕೆಟ್‌ ನೀಡಿಲ್ಲ, ಬುಧವಾರದ 72 ಹೆಸರುಗಳ ಪಟ್ಟಿಯಲ್ಲಿ 30 ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿದೆ.
ಎರಡು ಪಟ್ಟಿಗಳು ಸೇರಿದಂತೆ 267 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, 140 ಹಾಲಿ ಸಂಸದರಿಗೆ ಟಿಕೆಟ್‌ ನೀಡಲಾಗಿದೆ. ಆದರೆ 67 ಸಂಸದರಿಗೆ ಟಿಕೆಟ್ ನೀಡಲಾಗಿಲ್ಲ.

ದೆಹಲಿಯಲ್ಲಿ ಪ್ರಮುಖ ಪುನರ್ರಚನೆ..
ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಪ್ರಮುಖ ಪುನರ್ರಚನೆಯಾಗಿದೆ. ಪೂರ್ವ ದೆಹಲಿ ಲೋಕಸಭಾ ಸ್ಥಾನಕ್ಕೆ ಬಿಜೆಪಿಯು ಹಾಲಿ ಸಂಸದರಾದ ಮಾಜಿ ಕ್ರಿಕೆಟಿಗ ಗೌತಮ ಗಂಭೀರ ಅವರ ಬದಲಿಗೆಹರ್ಷ ಮಲ್ಹೋತ್ರಾ ಅವರನ್ನು ಆಯ್ಕೆ ಮಾಡಿದೆ. ವಾಯವ್ಯ ದೆಹಲಿ ಕ್ಷೇತ್ರದಲ್ಲಿ ಹಾಲಿ ಸಂಸದರಾದ ಗಾಯಕ ಹನ್ಸ್‌ ರಾಜ ಹನ್ಸ್ ಬದಲಿಗೆ ಯೋಗೇಂದ್ರ ಚಂದೋಲಿಯಾ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ದೆಹಲಿಯಲ್ಲಿ ಹಾಲಿ ಸಂಸದ ಮನೋಜ ತಿವಾರಿ ಅವರಿಗೆ ಮಾತ್ರ ಟಿಕೆಟ್‌ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಐವರು ಹಾಲಿ ಸಂಸದರನ್ನು ಕೈಬಿಟ್ಟು ಹೊಸ ಮುಖಗಳಿಗೆ ಟಿಕೆಟ್‌ ನೀಡಿದೆ. ಸಬರ್ಕಾಂತಕ್ಕೆ ಕ್ಷೇತ್ರಕ್ಕೆ ಎರಡು ಅವಧಿಯ ಸಂಸದರಾದ ದೀಪ್‌ ಸಿನ್ಹ ಮಗನ್‌ ಸಿನ್ಹ ರಾಥೋಡ್ ಬದಲಿಗೆ ಭಿಖಾಜಿ ದುಧಾಜಿ ಠಾಕೋರ್ ಅವರಿಗೆ ಟಿಕೆಟ್‌ ನೀಡಿದೆ. ಭಾವನಗರ ಸ್ಥಾನಕ್ಕೆ ಎರಡು ಬಾರಿ ಸಂಸದರಾಗಿದ್ದ ಭಾರತಿಬೆನ್ ಧೀರೂಭಾಯಿ ಶಿಯಾಲ್ ಅವರ ಸ್ಥಾನಕ್ಕೆ ನಿಮುಬೆನ್ ಬಾಂಭಾನಿಯಾ ಅವರನ್ನು ಆಯ್ಕೆ ಮಾಡಲಾಯಿತು. ಛೋಟಾ ಉದಯ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಾಲಿ ಸಂಸದೆ ಗೀತಾಬೆನ್ ವಾಜೆಸಿಂಗ್‌ಭಾಯ್ ರಥ್ವಾ ಬದಲಿಗೆ ಜಶುಭಾಯ್ ಭಿಲುಭಾಯಿ ರಥ್ವಾ ಅವರನ್ನು ಕಣಕ್ಕಿಳಿಸಿದೆ. ಮೂರು ಅವಧಿಯ ಸಂಸದ ಮತ್ತು ಕೇಂದ್ರ ಸಚಿವ ದರ್ಶನಾ ವಿಕ್ರಂ ಜರ್ದೋಷ್ ಬದಲಿಗೆ ಮುಖೇಶ ಭಾಯ್ ಚಂದ್ರಕಾಂತ ದಲಾಲ್ ಅವರನ್ನು ಸೂರತ್‌ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಹರಿಯಾಣದಲ್ಲಿ ಬಿಜೆಪಿ ತನ್ನ ಹಾಲಿ ಸಂಸದೆ ಸುನೀತಾ ದುಗ್ಗಲ ಬದಲಿಗೆ ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಮಾಜಿ ಕಾಂಗ್ರೆಸ್ ನಾಯಕ ತನ್ವರ್‌ ಅವರನ್ನು ಸಿರ್ಸಾ ಸ್ಥಾನಕ್ಕೆ ಆಯ್ಕೆ ಮಾಡಿದೆ, ಇದು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕರ್ನಾಲ್ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಸಂಜಯ ಭಾಟಿಯಾ ಬದಲಿಗೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರನ್ನು ಕಣಕ್ಕಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಕರ್ನಾಟಕ…
ತನ್ನ ಎರಡನೇ ಪಟ್ಟಿಯಲ್ಲಿ, ಕರ್ನಾಟಕದಲ್ಲಿ ಬಿಜೆಪಿ ಐದು ಹೊಸ ಅಭ್ಯರ್ಥಿಗಳನ್ನು ಪರಿಚಯಿಸಿದೆ. ಕೊಪ್ಪಳಕ್ಕೆ ಎರಡು ಬಾರಿ ಸಂಸದರಾಗಿದ್ದ ಸಂಗಣ್ಣ ಅಮರಪ್ಪ ಕರಡಿ ಅವರ ಸ್ಥಾನಕ್ಕೆ ವೈದ್ಯರಾದ ಡಾ. ಬಸವರಾಜ ಕ್ಯಾವಟೋರ್ ಅವರಿಗೆ ಟಿಕೆಟ್‌ ನೀಡಿದೆ. ಬಳ್ಳಾರಿಯ ಪರಿಶಿಷ್ಟ ಪಂಗಡದ ಮೀಸಲು ಸ್ಥಾನಕ್ಕೆ ಹಾಲಿ ಸಂಸದ ವೈ. ದೇವೇಂದ್ರಪ್ಪ ಬದಲಿಗೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡಲಾಗಿದೆ. ಹಾವೇರಿ ಕ್ಷೇತ್ರದಲ್ಲಿ ಮೂರು ಬಾರಿ ಸಂಸದರಾಗಿದ್ದ ಶಿವಕುಮಾರ ಉದಾಸಿ (ಈ ಮೊದಲೇ ರಾಜಕೀಯಕ್ಕೆ ನಿವೃತ್ತಿ ಪ್ರಕಟಿಸಿದ್ದರು) ಬದಲಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್‌ ನೀಡಲಾಗಿದೆ. ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಬದಲಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಲಾಗಿದೆ, ಮೈಸೂರು ಕ್ಷೇತ್ರಕ್ಕೆ ಪ್ರತಾಪ ಸಿಂಹ ಬದಲಿಗೆ ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲಾಗಿದೆ. ಚಾಮರಾಜ ನಗರದಲ್ಲಿ ಆರು ಬಾರಿ ಸಂಸದರಾಗಿದ್ದ ಶ್ರೀನಿವಾಸ ಪ್ರಸಾದ್ ಬದಲಿಗೆ (ಈ ಮೊದಲೇ ಚುನಾವಣಾ ನಿವೃತ್ತಿ ಘೋಷಿಸಿದ್ದರು) ಬದಲಿಗೆ ಎಸ್ ಬಾಲರಾಜ ಅವರನ್ನು ಕಣಕ್ಕಿಳಿಸಿದ್ದಾರೆ. ದಾವಣಗೆರೆಯಲ್ಲಿ ನಾಲ್ಕು ಬಾರಿ ಸಂಸದರಾಗಿದ್ದ ಜಿ.ಎಂ.ಸಿದ್ದೇಶ್ಬವರ ಬದಲಿಗೆ ಗಾಯತ್ರಿ ಜಿ.ಎಂ ಸಿದ್ದೇಶ್ವರ ಅವರಿಗೆ ಟಿಕೆಟ್‌ ನೀಡಲಾಗಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಸಂಸದರಾದ ಶೋಭಾ ಕರಂದ್ಲಾಜೆ ಬದಲಿಗೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಬದಲಿಗೆ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಧಾರ್‌ ಕ್ಷೇತ್ರಕ್ಕೆ ಛತ್ತರ್ ಸಿಂಗ್ ದರ್ಬಾರ್ ಬದಲಿಗೆ ಸಾವಿತ್ರಿ ಠಾಕೂರ್ ಅವರನ್ನು ಕಣಕ್ಕಿಳಿಸಿದೆ. ಬಾಲಾಘಾಟ್‌ ಕ್ಷೇತ್ರಕ್ಕೆ ದಲ್ ಸಿಂಗ್ ಬಿಸೆನ್ ಬದಲಿಗೆ ಭಾರತಿ ಪಾರ್ಧಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಮಹಾರಾಷ್ಟ್ರದಲ್ಲಿ ….
ಮಹಾರಾಷ್ಟ್ರದಲ್ಲಿ ಬಿಜೆಪಿ ಐದು ಲೋಕಸಭಾ ಸ್ಥಾನಗಳಲ್ಲಿ ತನ್ನ ಹಾಲಿ ಸಂಸದರನ್ನು ಬದಲಿಸಿದೆ. ಜಲಗಾಂವ್‌ ಕ್ಷೇತ್ರಕ್ಕೆ ಹಾಲಿ ಸಂಸದ ಉನ್ಮೇಶ ಭಯ್ಯಾಸಾಹೇಬ ಪಾಟೀಲ ಬದಲಿಗೆ ಸ್ಮಿತಾ ವಾಘ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂಬೈ ಉತ್ತರಕ್ಕೆ ಗೋಪಾಲ ಚೈನಯ್ಯ ಶೆಟ್ಟಿ ಬದಲಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಆಯ್ಕೆ ಮಾಡಿದೆ. ಅಕೋಲಾಗೆ ಸಂಜಯ ಶಾಮರಾವ್ ಧೋತ್ರೆ ಬದಲಿಗೆ ಅನುಪ್ ಧೋರ್ಟೆ ಾವರನ್ನು ಕಣಕ್ಕಿಳಿಸಲಾಗಿದೆ. ಮುಂಬೈ ನಾರ್ತ್ ಈಸ್ಟ್‌ ಕ್ಷೇತ್ರಕ್ಕೆ ಮನೋಜ ಕಿಶೋರ ಭಾಯ್ ಕೋಟಕ್ ಬದಲಿಗೆ ಮಿಹಿರ್ ಕೊಟೇಚಾ ಅವರನ್ನು ಕಣಕ್ಕಿಳಿಸಲಾಗಿದೆ. ಬೀಡ್‌ ಕ್ಷೇತ್ರದಲ್ಲಿ ಪ್ರೀತಂ ಗೋಪಿನಾಥ್ ರಾವ್ ಮುಂಡೆ ಅವರ ಬದಲಿಗೆ ಅವರ ಸಹೋದರಿ ಪಂಕಜಾ ಮುಂಡೆ ಅವರನ್ನು ಕಣಕ್ಕಿಳಿಸಲಾಗಿದೆ. ಹೀಗೆ ಬಿಜೆಪಿಯಲ್ಲಿ ಒಟ್ಟು 63 ಸಂಸದರಿಗೆ ಟಿಕೆಟ್‌ ಕೈತಪ್ಪಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement