ಚುನಾವಣಾ ಬಾಂಡ್‌ ಸಂಖ್ಯೆಗಳನ್ನು ಬಹಿರಂಗಪಡಿಸದ ಎಸ್‌ ಬಿಐ : ಸುಪ್ರೀಂ ಕೋರ್ಟ್‌ ನೋಟಿಸ್‌

ನವದೆಹಲಿ: ಚುನಾವಣಾ ಬಾಂಡ್‌ಗಳನ್ನು ಗುರುತಿಸಲು ಸಹಾಯ ಮಾಡುವ ಬಾಂಡ್‌ಗಳ ಸಂಖ್ಯೆಗಳನ್ನು ಬಹಿರಂಗಪಡಿಸದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ಕ್ಕೆ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.
ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಮಾರ್ಚ್ 11ರಂದು ನ್ಯಾಯಾಲಯ ನೀಡಿದ್ದ ಆದೇಶವನ್ನು ಎಸ್‌ಬಿಐ ಸಂಪೂರ್ಣ ಪಾಲಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ, ಬಿ ಆರ್‌ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ ಮಿಶ್ರಾ ಅವರನ್ನೊಳಗೊಂಡ ಐವರು ಸದಸ್ಯರ ಪೀಠ ಹೇಳಿದೆ.
“ಚುನಾವಣಾ ಬಾಂಡ್‌ ಖರೀದಿಯ ದಿನಾಂಕ, ಖರೀದಿದಾರರ ಹೆಸರು, ಮುಖಬೆಲೆ ಸೇರಿದಂತೆ ಎಲ್ಲಾ ವಿವರಗಳು ಲಭ್ಯವಾಗಬೇಕು ಎಂದು ಸಾಂವಿಧಾನಿಕ ಪೀಠ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಎಸ್‌ಬಿಐ ಚುನಾವಣಾ ಬಾಂಡ್ ಸಂಖ್ಯೆಗಳನ್ನು (ಆಲ್ಫಾ ಸಂಖ್ಯಾತ್ಮಕ ಸಂಖ್ಯೆಗಳು) ಬಹಿರಂಗಪಡಿಸಿಲ್ಲ ಎಂಬ ವಾದವಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐಗೆ ನೋಟಿಸ್ ಜಾರಿ ಮಾಡಿ ಸೋಮವಾರದೊಳಗೆ ಪ್ರತಿಕ್ರಿಯಿಸುವಂತೆ ಎಸ್‌ಬಿಐಗೆ ನೋಟಿಸ್ ನೀಡುವಂತೆ ನಾವು ರಿಜಿಸ್ಟ್ರಿಗೆ ನಿರ್ದೇಶನ ನೀಡುತ್ತಿದ್ದೇವೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಬೇರೆ ಯಾವುದೇ ಪ್ರತಿಗಳಿಲ್ಲದ ಕಾರಣ ಮುಚ್ಚಿದ ಲಕೋಟೆಗಳು / ಪೆಟ್ಟಿಗೆಗಳಲ್ಲಿ ಸಲ್ಲಿಸಿದ ಚುನಾವಣಾ ಬಾಂಡ್‌ ದಾಖಲೆಗಳನ್ನು ಹಿಂತಿರುಗಿಸುವಂತೆ ಮುಖ್ಯ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಚುನಾವಣಾ ಆಯೋಗ ಮನವಿ ಸಲ್ಲಿಸಿತ್ತು.
ಅದನ್ನು ಹಿಂತಿರುತಿಸಿದ ಬಳಿಕ ತನ್ನ ಜಾಲತಾಣದಲ್ಲಿ ಆ ದಾಖಲೆಗಳನ್ನು ಪ್ರಕಟಿಸಬಹುದಾಗಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಮೂಲಪ್ರತಿಗಳನ್ನು ನಕಲುಮಾಡಿಟ್ಟುಕೊಂಡು ಚುನಾವಣಾ ಆಯೋಗಕ್ಕೆ ಹಿಂತಿರುಗಿಸುವಂತೆ ನ್ಯಾಯಾಲಯ ರಿಜಿಸ್ಟ್ರಿಗೆ ನಿರ್ದೇಶಿಸಿತು.
ಈ ವೇಳೆ ಚುನಾವಣಾ ಬಾಂಡ್‌ ಸಂಖ್ಯೆಗಳನ್ನು ಬಹಿರಂಗಪಡಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಎಸ್‌ಬಿಐಗೆ ನೋಟಿಸ್‌ ನೀಡಿತು.

ಪ್ರಮುಖ ಸುದ್ದಿ :-   ವೀಡಿಯೊ..| ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿ ಒಳಕ್ಕೆ ಚಪ್ಪಲಿ ತೆಗೆದು ಬರುವಂತೆ ಹೇಳಿದ್ದಕ್ಕೆ ವೈದ್ಯರಿಗೆ ಥಳಿಸಿದ ರೋಗಿಯ ಕುಟುಂಬ...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement