ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್‌ 354 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಸಂತ್ರಸ್ತೆಯ ತಾಯಿ ಗುರುವಾರ ಸಂಜೆ ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಿದ್ದು, ದೂರಿನನ್ವಯ ಸದಾಶಿವನಗರ ಪೊಲೀಸ್‌ ಠಾಣೆ ಪೊಲೀಸರು ಗುರುವಾರ ಮಧ್ಯರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆಬ್ರವರಿ 2ರಂದು ಯಡಿಯೂರಪ್ಪ ಅವರ ನಿವಾಸದಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಲಾಗಿದ್ದು ಸಹಾಯ ಕೇಳಲು ಹೋಗಿದ್ದಾಗ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ದೂರುದಾರರು ತಿಳಿಸಿರುವಂತೆ ಅತ್ಯಾಚಾರ ಪ್ರಕರಣದಲ್ಲಿ ನಮಗೆ ಅನ್ಯಾಯವಾಗಿದೆ, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಸಂತ್ರಸ್ತೆ ಹಾಗೂ ಸಂತ್ರಸ್ತೆಯ ತಾಯಿ ಮನವಿ ಮಾಡಲು ಯಡಿಯೂರಪ್ಪ ಮನೆಗೆ ಹೋಗಿದ್ದಾಗ ಯಡಿಯೂರಪ್ಪನವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ವಿಷಯ ಯಾರಿಗೂ ತಿಳಿಸಬೇಡಿ ಎಂದು ನನ್ನನ್ನು ತಡೆದಿದ್ದರು. ಬಾಲಕಿ ಭಯಗೊಂಡಿದ್ದರಿಂದ ತಡವಾಗಿ ದೂರು ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಲೋಕಸಭಾ ಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆಯಾಗಲಿದ್ದು, ಈ ಸಮಯದಲ್ಲಿ ಯಡಿಯೂರಪ್ಪ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಪೋಕ್ಸೋ ಪ್ರಕರಣ ದಾಖಲಾಗಿರುವುದರಿಂದ ಅವರಿಗೆ ಬಂಧನದ ಭೀತಿಯೂ ಎದುರಾಗಿದೆ.ಈ ಆರೋಪಗಳಿಗೆ  ಯಡಿಯೂರಪ್ಪ ಅಥವಾ ಅವರ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement