ಬೆಂಗಳೂರು: ರಾಜ್ಯದ 7ನೇ ವೇತನ ಆಯೋಗವು ಇಂದು, ಶನಿವಾರ ವರದಿ ಸಲ್ಲಿಸಿದ್ದು ಮೂಲವೇತನದ 27.5%ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಶನಿವಾರ ನಿವೃತ್ತ ಕಾರ್ಯದರ್ಶಿ ಮುಖ್ಯ ಕಾರ್ಯದರ್ಶಿ, ಕೆ ಸುಧಾಕರ ರಾವ್ ಅಧ್ಯಕ್ಷತೆಯ ಏಳನೇ ವೇತನ ಆಯೋಗದ ವರದಿ ಸ್ವೀಕರಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು.
7ನೇ ವೇತನ ಆಯೋಗದ ಅವಧಿಯನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಲಾಗಿತ್ತು. ಈ ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದೆ. ಶುಕ್ರವಾರ ನಾನು ಮೈಸೂರಿನಲ್ಲಿದ್ದ ಕಾರಣ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ವರದಿಯಲ್ಲಿ ಕನಿಷ್ಠ ಮೂಲವೇತನವನ್ನು 17000 ರೂ ಗಳಿಂದ 27 ಸಾವಿರ ರೂಗಳಿಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ ಎಂದರು.
ಅಲ್ಲದೆ, ಇನ್ನೂ ಅನೇಕ ಶಿಫಾರಸುಗಳಿದ್ದು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗಿದೆ. ಆರ್ಥಿಕ ಇಲಾಖೆಯು ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಸಲಹೆಗಳನ್ನು ನೀಡಲಿದ್ದು, ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ ವನಹಳ್ಳಿ , ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾ ಡಾ.ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ