ವೀಡಿಯೊ…| ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ನಾಯಕನ ನೆನೆದು ಕಣ್ಣೀರಿಟ್ಟ ಪ್ರಧಾನಿ ಮೋದಿ ; ಭಾಷಣ ಕೆಲಕಾಲ ಸ್ಥಗಿತ

ಸೇಲಂ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮಿಳುನಾಡಿನ ಸೇಲಂನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ 2013 ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಹತ್ಯೆಗೀಡಾದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಆಡಿಟರ್‌’ ವಿ ರಮೇಶ ಅವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
“ಇಂದು, ನಾನು ಆಡಿಟರ್ ರಮೇಶ ಅವರನ್ನು ನೆನಪಿಸಿಕೊಳ್ಳುತ್ತೇನೆ” ಎಂದು ಹೇಳಿದ ಪ್ರಧಾನಿ ಮೋದಿ ಭಾವುಕರಾಗಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ಮೌನಕ್ಕೆ ಜಾರಿದರು. ಅವರ ಬಾಯಿಂದ ಮಾತು ಹೊರಡಲಿಲ್ಲ. ಪ್ರೇಕ್ಷಕರು ನಂತರ ಮೋದಿಯವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.
ತಮ್ಮ ಭಾಷಣವನ್ನು ಪುನರಾರಂಭಿಸಿದ ಪ್ರಧಾನಿ ಮೋದಿ, “ದುರದೃಷ್ಟವಶಾತ್, ಸೇಲಂನ ನನ್ನ ರಮೇಶ ನಮ್ಮ ನಡುವೆ ಇಲ್ಲ” ಎಂದು ಹೇಳಿದರು.
ʼಆಡಿಟರ್‌ʼ ವಿ. ರಮೇಶ ಅವರು ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ. “ಇಂದು ನಾನು ಸೇಲಂನಲ್ಲಿದ್ದೇನೆ, ನನಗೆ ಆಡಿಟರ್ ರಮೇಶ ನೆನಪಾಗುತ್ತಾರೆ … ಆಜ್ ಸೇಲಂ ಕಾ ಮೇರಾ ವೋ ರಮೇಶ್ ನಹೀ ಹೈ (ಇಂದು ಸೇಲಂನ ಆ ರಮೇಶ ನಮ್ಮೊಂದಿಗೆ ಇಲ್ಲ). ರಮೇಶ್ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ. ಅವರು ನಮ್ಮ ಪಕ್ಷದ ಸಮರ್ಪಿತ ನಾಯಕರಾಗಿದ್ದರು. ಅವರು ಮಹಾನ್ ವಾಗ್ಮಿ ಮತ್ತು ತುಂಬಾ ಶ್ರಮಜೀವಿಯಾಗಿದ್ದರು. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು..

ʼಆಡಿಟರ್ʼ ರಮೇಶ್ ಯಾರು…?
ಬಿಜೆಪಿಯ ತಮಿಳುನಾಡು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ‘ಆಡಿಟರ್‌’ ವಿ ರಮೇಶ (54) ಅವರನ್ನು 2013 ರಲ್ಲಿ ಸೇಲಂ ಪಟ್ಟಣದ ಮರವನೇರಿ ಪ್ರದೇಶದಲ್ಲಿ ಕೆಲವರ ಗುಂಪು ಅವರ ಮನೆಯ ಕಾಂಪೌಂಡ್‌ ಬಳಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿತ್ತು.
ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ ರಮೇಶ ಅವರು ತಮ್ಮ ಹಿಂದುತ್ವದ ನಿಲುವಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು. ಎನ್‌ಡಿಎ ಅಧಿಕಾರಾವಧಿಯಲ್ಲಿ ಅವರನ್ನು ಚೆನ್ನೈ ಪೋರ್ಟ್ ಟ್ರಸ್ಟ್‌ನ ಟ್ರಸ್ಟಿಯಾಗಿ ನೇಮಿಸಲಾಯಿತು.
ರಮೇಶ ಸಹೋದರ ಶೇಷಾದ್ರಿ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ಅವರ ದುರಂತ ಹತ್ಯೆಯ ಒಂದು ವಾರದ ಮೊದಲು, ರಮೇಶ ಅವರನ್ನು ರಾಜ್ಯದ ಅಧಿಕೃತ ಪಕ್ಷದ ವಕ್ತಾರರನ್ನಾಗಿ ನೇಮಿಸಲಾಯಿತು 2011 ರಲ್ಲಿ ದುಷ್ಕರ್ಮಿಗಳ ಗುಂಪೊಂದು ಅವರ ಕಾರನ್ನು ಸುಟ್ಟು ಹಾಕಿತ್ತು.

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

ಇದೇವೇಳೆ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ.ಎನ್.ಲಕ್ಷ್ಮಣನ್ ಅವರನ್ನೂ ಸ್ಮರಿಸಿರುವ ಪ್ರಧಾನಿ, ತುರ್ತುಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಅವರ ಅವಿಸ್ಮರಣೀಯ ಪಾತ್ರವನ್ನು ನೆನಪಿಸಿಕೊಂಡರು. “ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದಲ್ಲಿ ಲಕ್ಷ್ಮಣನ್ ಅವರ ಪಾತ್ರ ಮತ್ತು ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯು ಯಾವಾಗಲೂ ಸ್ಮರಣೀಯವಾಗಿದೆ. ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆಗೆ ಅವರ ಕೊಡುಗೆ ಅವಿಸ್ಮರಣೀಯ. ಅವರು ರಾಜ್ಯದಲ್ಲಿ ಅನೇಕ ಶಾಲೆಗಳನ್ನು ಪ್ರಾರಂಭಿಸಿದರು ಎಂಬುದನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು.

ತಮಿಳುನಾಡಿನ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಶ್ರಮಿಸಿದೆ ಎಂದು ಪ್ರಧಾನಿ ಹೇಳಿದರು. “ನಮ್ಮ ಸರ್ಕಾರವು ತಮಿಳುನಾಡಿನ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಯಾವುದೇ ಅವಕಾಶವನ್ನೂ ಬಿಡುತ್ತಿಲ್ಲ. ಉಚಿತ ವೈದ್ಯಕೀಯ ಚಿಕಿತ್ಸೆಯಿಂದ ಮನೆಗಳಲ್ಲಿ ಟ್ಯಾಪ್ ವಾಟರ್ ಸಂಪರ್ಕಗಳನ್ನು ಒದಗಿಸುವವರೆಗೆ, ಉಚಿತ ಪಡಿತರ ಸೌಲಭ್ಯಗಳಿಂದ ಮುದ್ರಾ ಯೋಜನೆಯ ಮೂಲಕ ತಮಿಳುನಾಡಿನ ಮಹಿಳೆಯರಿಗೆ ಪ್ರಯೋಜನವನ್ನು ನೀಡುವವರೆಗೆ, ನಾವು ಅತ್ಯುತ್ತಮವಾದ ಸೇವೆ ನೀಡುವುದನ್ನು ಖಾತ್ರಿಪಡಿಸಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡು ಜನತೆ ಬಿಜೆಪಿಯ ಮೇಲೆ ನಂಬಿಕೆ ಇಡಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು “ಈಗ ತಮಿಳುನಾಡಿನ ಜನತೆ ಏಪ್ರಿಲ್ 19 ರಂದು ಪ್ರತಿ ಮತವೂ ಬಿಜೆಪಿ ಮತ್ತು ಎನ್‌ಡಿಎಗೆ ಹೋಗಬೇಕು ಎಂದು ನಿರ್ಧರಿಸಿದೆ. ಈ ಬಾರಿ ಎನ್‌ಡಿಎ ಗೆಲ್ಲುವ ಸ್ಥಾನಗಳ ಸಂಖ್ಯೆ 400 ದಾಟಲಿದೆ” ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement