ತನ್ನ ಆದೇಶ ಧಿಕ್ಕರಿಸಿದ ತಮಿಳುನಾಡು ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ ಕೆಂಡಾಮಂಡಲ

ನವದೆಹಲಿ : ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖಂಡ ಕೆ ಪೊನ್ಮುಡಿ ಅವರಿಗೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಕಳೆದ ವಾರ ತಡೆಯಾಜ್ಞೆ ನೀಡಿದ ನಂತರವೂ ಅವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ನಡವಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಗರಂ ಆಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ರಾಜ್ಯಪಾಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ನ್ಯಾಯಾಲಯವು ಶಿಕ್ಷೆಯನ್ನು ತಡೆಹಿಡಿದಿರುವಾಗ, ರಾಜ್ಯಪಾಲರಿಗೆ ಅದಕ್ಕೆ ವ್ಯತಿರಿಕ್ತವಾಗಿ ಹೇಳಲು ಏನೂ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ರಾಜ್ಯಪಾಲರ ನಡವಳಿಕೆಯ ಬಗ್ಗೆ ನಾವು ಗಂಭೀರ ಕಳವಳ ಹೊಂದಿದ್ದೇವೆ. ಅವರು ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಧಿಕ್ಕರಿಸುತ್ತಿದ್ದಾರೆ. ಶಿಕ್ಷೆಯನ್ನು ತಡೆಹಿಡಿದಿರುವಾಗ ರಾಜ್ಯಪಾಲರಿಗೆ ಅದಕ್ಕೆ ವ್ಯತಿರಿಕ್ತವಾಗಿ ಹೇಳುವುದು ಏನೂ ಇರುವುದಿಲ್ಲ. ನಮ್ಮ ಆದೇಶವನ್ನು ಜಾರಿಗೆ ತರಬೇಕು ಅಷ್ಟೆ ” ಎಂದು ಪೀಠವು ತಾಕೀತು ಮಾಡಿತು.

ಸಾಂವಿಧಾನಿಕ ಅಧಿಕಾರಿಯೊಬ್ಬರು ಈ ರೀತಿ ವರ್ತಿಸಬಹುದೇ ಎಂದು ಪ್ರಶ್ನಿಸಿದ ನ್ಯಾಯಾಲಯವು, ಚುನಾಯಿತ ಸರ್ಕಾರದ ನಿರ್ಧಾರಗಳನ್ನು ಕಾರ್ಯಗತಗೊಳಿಸುವ ನಾಮಮಾತ್ರದ ಮುಖ್ಯಸ್ಥರು ರಾಜ್ಯಪಾಲರು ಎಂದು ಪುನರುಚ್ಚರಿಸಿತು.
ರವಿ ಅವರ ನಡವಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಾಲಯ ಇದೇ ವೇಳೆ ತಿಳಿಸಿದರು.
“ಮಿಸ್ಟರ್ ಅಟಾರ್ನಿ ಜನರಲ್, ನೀವು ಏನು ಮಾಡುತ್ತಿದ್ದೀರಿ? ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ ಮತ್ತು ಅವರು [ರಾಜ್ಯಪಾಲರು] ಪ್ರಮಾಣ ವಚನ ಸ್ವೀಕರಿಸಲಾಗದು ಎಂದು ಹೇಳುತ್ತಾರೆಯೇ? ಆ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ದಯವಿಟ್ಟು ನಿಮ್ಮ ರಾಜ್ಯಪಾಲರಿಗೆ ಹೇಳಿ” ಎಂದು ಎಜಿ ಅವರಿಗೆ ಪೀಠ ಹೇಳಿತು.

ಪ್ರಮುಖ ಸುದ್ದಿ :-   ಬ್ಲೇಡ್‌ ಹಿಡಿದು ಗ್ಯಾಂಗ್-ರೇಪ್ ಯತ್ನದಿಂದ ಪಾರಾದ ನರ್ಸ್... !

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಶಿಫಾರಸಿನ ಮೇಲೆ ಪೊನ್ಮುಡಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಮರು ಸೇರಿಸಿಕೊಳ್ಳಲು ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು (ಟಿ.ಎನ್.) ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪೊನ್ಮುಡಿ ಅವರ ಶಿಕ್ಷೆಯನ್ನು ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ನಂತರ ಅವರನ್ನು ಸಚಿವರನ್ನಾಗಿ ನೇಮಿಸಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವಾರ ಉನ್ನತ ನ್ಯಾಯಾಲಯವು ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿದ ನಂತರ, ಪೊನ್ಮುಡಿ ಅವರ ವಿಧಾನಸಭಾ ಸದಸ್ಯತ್ವವನ್ನು ಪುನಃಸ್ಥಾಪಿಸಲಾಯಿತು.
ಪೊನ್ಮುಡಿ ಅವರಿಗೆ ಮತ್ತೊಮ್ಮೆ ಪ್ರಮಾಣ ವಚನ ಬೋಧಿಸುವಂತೆ ಸಿಎಂ ಸ್ಟಾಲಿನ್ ರಾಜ್ಯಪಾಲರನ್ನು ಕೋರಿದರು. ಆದರೆ, ಪೊನ್ಮುಡಿ ಅವರ ಶಿಕ್ಷೆಯನ್ನು ತಡೆಹಿಡಿಯಲಾಗಿದೆ ಮತ್ತು ಬದಿಗಿಡಲಾಗಿಲ್ಲ ಎಂಬ ಕಾರಣ ನೀಡಿ ರಾಜ್ಯಪಾಲರು ಅದಕ್ಕೆ ನಿರಾಕರಿಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement