ವೀಡಿಯೊ…| ‘ಒಂದು ಕಾಲದಲ್ಲಿ ಅರವಿಂದ ಕೇಜ್ರಿವಾಲ್ ನನ್ನೊಂದಿಗೆ ಸಾರಾಯಿ ವಿರುದ್ಧ ಧ್ವನಿ ಎತ್ತಿದ್ದರು, ಆದರೆ ಈಗ….’: ಕೇಜ್ರಿವಾಲ್ ಬಂಧನದ ಬಗ್ಗೆ ಅಣ್ಣಾ ಹಜಾರೆ

ನವದೆಹಲಿ : ದಶಕದ ಹಿಂದೆ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು, ತನ್ನೊಂದಿಗೆ ಸಾರಾಯಿ ವಿರುದ್ಧ ಹೋರಾಟ ನಡೆಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಅಬಕಾರಿ ನೀತಿ ರೂಪಿಸದಂತೆ ಎಚ್ಚರಿಸಿದ್ದೆ ಎಂದು ಹೇಳಿದ್ದಾರೆ.
2010ರ ಲೋಕಪಾಲ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಅಣ್ಣಾ ಹಜಾರೆ ಜೊತೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅರವಿಂದ ಕೇಜ್ರಿವಾಲ್ ಅವರನ್ನು ಈಗ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್‌ ಅವರಿಗೆ ಅವರು ಮಾಡಿದ ಕೃತ್ಯವೇ ಮುಳುವಾಗಿದೆ ಎಂದು ಮಹಾರಾಷ್ಟ್ರದ ತಮ್ಮ ಹಳ್ಳಿ ರಾಲೇಗಾಂವ್ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಹೇಳಿದ್ದಾರೆ.

ನನ್ನೊಂದಿಗೆ ಕೆಲಸ ಮಾಡುತ್ತಿದ್ದ, ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ಅರವಿಂದ ಕೇಜ್ರಿವಾಲ್ ಈಗ ಮದ್ಯದ ನೀತಿಗಳನ್ನು ರೂಪಿಸುತ್ತಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ, ಅವರು ಮಾಡಿದ ಸ್ವಯಂ  ಕೃತ್ಯಗಳಿಂದ ಅವರ ಬಂಧನವಾಗಿದೆ ಎಂದು ಹಜಾರೆ ವೀಡಿಯೊದಲ್ಲಿ ಹೇಳಿದ್ದಾರೆ. ‘ಮದ್ಯದಿಂದ ದೂರವಿರಿ ಎಂದು ಹಲವು ಬಾರಿ ಹೇಳಿದ್ದೆ, ಅವರು (ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ) ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಲಿಲ್ಲ. ಅಬಕಾರಿ ನೀತಿಯಿಂದ ಹೆಚ್ಚು ಆದಾಯ ಬರಲಿದೆ ಎಂದು ಅವರು ಭಾವಿಸಿದ್ದರು. ಅದಕ್ಕಾಗಿಯೇ ಅಬಕಾರಿ ನೀತಿ ರೂಪಿಸಿದರು. ಅದರಿಂದ ನೊಂದು ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೆ. ನನ್ನ ಮಾತನ್ನು ಕೇಳಲಿಲ್ಲ ಎಂದು ಹೇಳಿದ್ದಾರೆ.

ನನ್ನ ಜೊತೆ ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ವ್ಯಕ್ತಿಯೇ ಅಬಕಾರಿ ನೀತಿ ಮಾಡುತ್ತಿದ್ದಾರೆ ಎಂದು ಬಹಳ ನೋವಾಗಿತ್ತು. ಅವರ ಕೃತ್ಯವೇ ಈಗ ಅವರಿಗೆ ಮುಳುವಾಗಿದೆ. ಅವರು ಏನೂ ತಪ್ಪು ಮಾಡದಿದ್ದರೆ ಬಂಧನದ ಅಗತ್ಯ ಬರುತ್ತಿರಲಿಲ್ಲ. ನಾನು ಯಾವಾಗಲೂ ದೇಶದ ಹಿತವನ್ನು ಮುಂದಿಡುತ್ತೇನೆ ಎಂದು ಹೇಳುತ್ತಿದ್ದೆ. ಈಗ ಕಾನೂನು ಮತ್ತು ಸರ್ಕಾರ ಏನು ಮಾಡಬೇಕೊ ಅದನ್ನು ಮಾಡುತ್ತವೆ. ನಾನು ಈಗ ಅವರಿಗೆ ಯಾವುದೇ ಸಲಹೆ ನೀಡುವುದಿಲ್ಲ… (ಕೇಜ್ರಿವಾಲ್ ಅವರ ಸ್ಥಿತಿಯ ಬಗ್ಗೆ) ನನಗೆ ಬೇಸರವಿಲ್ಲ” ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ಅಣ್ಣಾ ಹಜಾರೆ ಅವರು 2011 ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಮುಖವಾಗಿದ್ದರು, ಇದರಿಂದ ಎಎಪಿ ಹೊರಹೊಮ್ಮಿತು. ಅಣ್ಣಾ ಹಜಾರೆ ಈ ಹಿಂದೆಯೂ ಮದ್ಯದ ನೀತಿಯ ವಿರುದ್ಧ ಮಾತನಾಡಿದ್ದಾರೆ. ಅವರು 2022 ರಲ್ಲಿ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ನೀತಿಯ ಬಗ್ಗೆ ತಮ್ಮ “ನೋವು” ವ್ಯಕ್ತಪಡಿಸಿದ್ದರು.
ʼನೀವು ಮುಖ್ಯಮಂತ್ರಿಯಾದ ನಂತರ ನಾನು ಇದೇ ಮೊದಲ ಬಾರಿಗೆ ನಿಮಗೆ ಪತ್ರ ಬರೆಯುತ್ತಿದ್ದೇನೆ, ಏಕೆಂದರೆ ನಿಮ್ಮ ಸರ್ಕಾರದ ಮದ್ಯ ನೀತಿಯ ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವಾಗಿದೆ. ಮದ್ಯದಂತೆಯೇ ಅಧಿಕಾರವೂ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲು ಇದೆ ಎಂದು ತೋರುತ್ತದೆ ಎಂದು ಅಣ್ಣಾ ಹಜಾರೆ ಎಂದು ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಗುರುವಾರ ರಾತ್ರಿ ಜಾರಿ ನಿರ್ದೇಶನಾಲಯ (.ಇ.ಡಿ.) ಬಂಧಿಸಿದೆ. ಕೇಂದ್ರ ದೆಹಲಿಯ ಇ.ಡಿ ಕಚೇರಿಯಲ್ಲೇ ರಾತ್ರಿ ಕಳೆದಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement