ಲೋಕಸಭೆ ಚುನಾವಣೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ ಮೂರು ಕ್ಷೇತ್ರಗಳು ; ಸುಮಲತಾ ಮುಂದಿನ ನಡೆ ಏನು..?

ಬೆಂಗಳೂರು: ಜೆಡಿಎಸ್-ಬಿಜೆಪಿ ದೋಸ್ತಿಗಳ ಮಧ್ಯೆ ಅಸಮಾಧಾನಕ್ಕೆ ಕಾರಣವಾಗಿದ್ದ ಕೋಲಾರ ಕ್ಷೇತ್ರವನ್ನು ಬಿಜೆಪಿ ಕೊನೆಗೂ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಶನಿವಾರ ಅರಮನೆ ಮೈದಾನದ ಸಭಾಂಗಣದಲ್ಲಿ ಬಿಜೆಪಿಯ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಅವರು ಇದನ್ನು ತಿಳಿಸಿದ್ದಾರೆ.
ಮಂಡ್ಯ, ಹಾಸನ, ಕೋಲಾರ ಈ ಮೂರು ಕ್ಷೇತ್ರಗಳನ್ನು ಜೆಡಿಎಸ್‌ ಪಕ್ಷಕ್ಕೆ ಬಿಟ್ಟುಕೊಟ್ಟಿರುವುದಾಗಿ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ ದಾಸ್ ಬಹಿರಂಗವಾಗಿ ತರಬೇತಿ ಕಾರ್ಯಾಗಾರದಲ್ಲಿ ಹೇಳಿದ್ದಾರೆ. ಹೀಗಾಗಿ ಈವರೆಗೂ ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದ ಹಾಗೂ ಮಂಡ್ಯ ಟಿಕೆಟ್‌ ತನಗೇ ಸಿಗುತ್ತದೆ ಎಂದು ಭರವಸೆಯಲ್ಲಿದ್ದ ಸಂಸದೆ ಸುಮಲತಾ ಅಂಬರೀಶಗೆ ನಿರಾಸೆಯಾಗುವಂತಾಗಿದೆ. ಹೀಗಾಗಿ ಅವರ ಮುಂದುನ ನಡೆ ಏನು ಎಂಬುದು ಮಹತ್ವ ಪಡೆದಿದೆ. ಟಿಕೆಟ್ ಕೈ ತಪ್ಪಿದ ಬಳಿಕ ಸುಮಲತಾ ಅವರು ಪಕ್ಷೇತರವಾಗಿ ಮಂಡ್ಯದಲ್ಲಿ ಕಣಕ್ಕಿಳಿಯುತ್ತಾರೋ ಅಥವಾ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೋ ಅಥವಾ ಬೇರೆ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟಿದ್ದೇವೆ. ಈ ಮೂಲಕ ಜೆಡಿಎಸ್‍ಗೆ ಮೂರು ಸೀಟು ಬಿಟ್ಟು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಕೋಲಾರ, ಹಾಸನ, ಮಂಡ್ಯ ಕಾರ್ಯಕರ್ತರು ಪ್ರಧಾನಿ ಮೋದಿಗಾಗಿ ಒಟ್ಟಾಗಿ ಕೆಲಸ ಮಾಡಿ. ವೈಯಕ್ತಿಕ ಮುನಿಸು ಏನೇ ಇದ್ದರೂ ಅನ್ನು ಬದಿಗಿಟ್ಟು ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಿ ಎಂದು ರಾಧಾ ಮೋಹನದಾಸ ಅವರು ಮನವಿ ಮಾಡಿದ್ದಾರೆ.
ಬಿಜೆಪಿ 25 ಅಭ್ಯರ್ಥಿಗಳ ಆಯ್ಕೆ ಮಾಡಿದೆ. ಜೆಡಿಎಸ್‍ಗೆ ಮೂರು ಕ್ಷೇತ್ರ ಬಿಟ್ಟು ಕೊಡಲಾಗಿದೆ. ಅಭ್ಯರ್ಥಿ ಯಾರಾಗಾಬೇಕು ಎಂದು ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಒಗ್ಗಟ್ಟಾಗಿ ಕೆಸ ಮಾಡಬೇಕು ಎಂದು ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕರಾದ ವಿ. ಸುನೀಲಕುಮಾರ ಉಪಸ್ಥಿತರಿದ್ದರು

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement