ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ, ಹಳಕಾರ, ಚಿತ್ರಗಿ ಮೊದಲಾದ ಪ್ರದೇಶಗಳಲ್ಲಿ ರಾತ್ರಿ ಅವಧಿಯಲ್ಲಿ ಆಗಾಗ ಜನರಿಗೆ ಕಾಣಿಸಿಕೊಂಡು ಜನರಿಗೆ ಆತಂಕ ಮೂಡಿಸಿದ್ದ ಚಿರತೆಯೊಂದು ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ.
ಕುಮಟಾ ತಾಲೂಕಿನ ಚಿತ್ರಗಿಯ ಶೇಷಾದ್ರಿ ಗುಡ್ಡದಲ್ಲಿ ಅರಣ್ಯ ಇಲಾಖೆಯವರು ಇಟ್ಟಿರುವ ಬೋನಿನಲ್ಲಿ ಈ ಚಿರತೆ ಸೆರೆಯಾಗಿದೆ. ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಈಗ್ಗೆ ಸುಮಾರು 20-30 ದಿನಗಳ ದಿವಸದ ಹಿಂದೆ ಕುಮಟಾ ತಾಲೂಕಿನ ಹೊಲನಗದ್ದೆಯ ಬೆಳ್ಳಕ್ಕಿಯ ದತ್ತಾತ್ರೇಯ ಭಟ್ಟರ ಮನೆಗೆ ರಾತ್ರಿ ಸಮಯದಲ್ಲಿ ಬಂದಿದ್ದ ಈ ಚಿರತೆಯು ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ದಿತ್ತು. ಈ ದೃಶ್ಯ ಮನೆಯಲ್ಲಿದ್ದ ಸಿ.ಸಿ. ಟಿವಿಯಲ್ಲಿ ಸೆರೆಯಾಗಿತ್ತು. ನಂತರ ಮತ್ತೆ 2 ಬಾರಿ ನಾಯಿಗಾಗಿ ಅವರ ಮನೆಗೆ ರಾತ್ರಿ ಸಮಯದಲ್ಲಿ ಬಂದಿತ್ತು. ಈ ಮದ್ಯೆ ಹಣ್ಣೇಮಠದ ರಸ್ತೆಯಲ್ಲಿ ಸಂತೋಷ ಪಟಗಾರ ಎಂಬವರಿಗೆ ಚಿರತೆ ಕಂಡಿತ್ತು. 8 ದಿನಗಳ ಹಿಂದೆ ತೆಪ್ಪದ ರಸ್ತೆ ಪಕ್ಕದಲ್ಲಿ ಚಿರತೆ ಓಡಿಹೋಗಿದ್ದನ್ನು ನಾಗರಾಜ ಎಂಬವರು ನೋಡಿದ್ದರು.
ಹೀಗೆ ಈ ಚರತೆ ಅನೇಕ ಬಾರಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಈಗ ಈ ಚಿರತೆ ಬೋನಿಗೆ ಬಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬೋನಿನಲ್ಲಿ ಬಿದ್ದ ಚಿರತೆಯನ್ನು ವಲಯ ಅರಣ್ಯಧಿಕಾರಿ ಎಸ್.ಪಿ. ಪಟಗಾರ ಹಾಗೂ ಸಿಬ್ಬಂದಿ ರಾಘವೇಂದ್ರ ನಾಯ್ಕ ಮತ್ತಿತರರು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೋನಿನಲ್ಲಿ ಬಿದ್ದ ಚಿರತೆಯನ್ನು ಜನರು ಓಡಾಡದ ಸ್ಥಳದಲ್ಲಿ ಇಟ್ಟಿದ್ದೇವೆ. ಚಿರತೆಯನ್ನು ಎಲ್ಲಿಗೆ ಸಾಗಿಸುವುದು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸಹಾಯಕ ಅರಣ್ಯಧಿಕಾರಿ ಲೋಹಿತ ಅವರು ತಿಳಿಸಿದರು
ನಿಮ್ಮ ಕಾಮೆಂಟ್ ಬರೆಯಿರಿ