ಬೀದರ : 9ನೇ ತರಗತಿಯ ಬೋರ್ಡ್ ಪರೀಕ್ಷೆಯ ಪ್ರವೇಶ ಪತ್ರ (ಹಾಲ್ ಟಿಕೆಟ್)ವನ್ನು ಕುರಿ ತಿಂದ ಕಾರಣ ಮನನೊಂದು ವಿದ್ಯಾರ್ಥಿನಿಯೊಬ್ಬಳು ಬೇಸರಪಟ್ಟು ಆಕೆ ಆತ್ಮಹತ್ಯೆಗೆ ಮುಂದಾದ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಪೂಜಾ ಮಾರುತಿ ಮೇತ್ರೆ (14) ಆತ್ಮಹತ್ಯೆಗೆ ಪ್ರಯತ್ನ ಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಗೋಕುಳ ಗ್ರಾಮದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಈಕೆಯ ಪ್ರವೇಶ ಪತ್ರ(ಹಾಲ್ ಟಿಕೆಟ್)ವನ್ನು ಸೋಮವಾರ ರಾತ್ರಿ ಕುರಿ ತಿಂದುಬಿಟ್ಟಿದೆ. ಇದರಿಂದ ಆತಂಕಗೊಂಡ ಆಕೆ ಶಾಲೆಯ ಮುಖ್ಯ ಗುರುಗಳ ಹೆಸರಿನಲ್ಲಿ ಒಂದು ಪತ್ರ ಬರೆದಿದ್ದು ನನ್ನ ಪರೀಕ್ಷೆ ಪ್ರವೇಶ ಪತ್ರ ಕಳೆದ ಕಾರಣ ನನಗೆ ಶಾಲೆಗೆ ಬರಲು ಆಗಲ್ಲ, ನಾನು ಸತ್ತು ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ ಎಂದು ಅದರಲ್ಲಿ ವಿವರಿಸಿದ್ದಾಳೆ ಎಂದು ಹೇಳಲಾಗಿದೆ.
ಅಣ್ಣನ ಕೈಗೆ ಪತ್ರವನ್ನು ಕೊಟ್ಟು ಸಂಜೆ ಏಳು ಗಂಟೆ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ನಂತರ ಈಕೆ ನಾಪತ್ತೆಯಾಗಿದ್ದು ಗಮನಕ್ಕೆ ಬಂದ ನಂತರ ಮನೆಯವರು ಹಾಗೂ ಅಕ್ಕಪಕ್ಕದವರು ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ 11:30 ರ ಸುಮಾರಿಗೆ ಬಾಲಕಿ ತನ್ನ ಸಂಬಂಧಿಕರ ಜಮೀನಿನ ಬಾವಿಯಲ್ಲಿ ಆಕೆ ಅಳುತ್ತಿರುವುದು ಕೇಳಿದೆ. ನಂತರ ಅವಳನ್ನು ರಕ್ಷಿಸಿ ಬಾವಿಯಿಂದ ಮೇಲೆ ತರಲಾಗಿದೆ.
ಸುಮಾರು 30 ಅಡಿಗಳಷ್ಟು ಬಾವಿ ಆಳ ಇದೆ. ಬೇಸಿಗೆ ಕಾರಣ ಬಾವಿಯಲ್ಲಿ ನೀರು ಕಡಿಮೆ ಇದ್ದುದರಿಂದ ವಿದ್ಯಾರ್ಥಿನಿಯ ಜೀವಕ್ಕೆ ಅಪಾಯವಾಗಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಯದಿಂದ ಪಾರಾಗಿದ್ದಾಳೆ. ಮಂಗಳವಾರ ಎಂದಿನಂತೆ ಆಕೆ ಪರೀಕ್ಷೆಗೆ ಹಾಜರಾಗಿದ್ದಾಳೆ.
ನಿಮ್ಮ ಕಾಮೆಂಟ್ ಬರೆಯಿರಿ