ನವದೆಹಲಿ: ಬಿಹಾರದ ಮಹಾಘಟಬಂಧನ ಮೈತ್ರಿಕೂಟವು ಲೋಕಸಭೆ ಚುನಾವಣೆಗೆ ಶುಕ್ರವಾರ ತನ್ನ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದೆ. ರಾಜ್ಯದ 40 ಲೋಕಸಭಾ ಸ್ಥಾನಗಳಲ್ಲಿ 26 ರಲ್ಲಿ ಆರ್‌ಜೆಡಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಒಂಬತ್ತು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಎಡಪಕ್ಷಗಳಿಗೆ ಐದು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ಕತಿಹಾರ್, ಕಿಶನ್‌ಗಂಜ್, ಪಾಟ್ನಾ ಸಾಹಿಬ್, ಸಸಾರಾಮ್, ಭಾಗಲ್ಪುರ, ಪಶ್ಚಿಮ ಚಂಪಾರಣ್, ಮುಜಾಫರಪುರ, ಸಮಸ್ತಿಪುರ ಮತ್ತು ಮಹಾರಾಜಗಂಜ್ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಹಂಚಿಕೆ ಮಾಡಲಾಗಿದೆ. ಎಡಪಕ್ಷಗಳು ಬೇಗುಸರಾಯ್, ಖಗರಿಯಾ, ಆರ್ಹ್, ಕರಕತ್ ಮತ್ತು ನಳಂದಾದಿಂದ ಸ್ಪರ್ಧಿಸಲಿವೆ. ಉಳಿದ 26 ಸ್ಥಾನಗಳಲ್ಲಿ ಆರ್‌ಜೆಡಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಬಿಹಾರದ 40 ಸ್ಥಾನಗಳಿಗೆ ನಡೆಯಲಿರುವ ಲೋಕಸಭೆ ಚುನಾವಣೆಯು ಏಪ್ರಿಲ್ 19, 26, ಮೇ 7, 13, 20, 25 ಮತ್ತು ಜೂನ್ 1 ರಂದು ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದರೆ ಆರ್‌ಜೆಡಿ ಮತ್ತು ಎಡಪಕ್ಷಗಳು ಒಂದೂ ಸ್ಥಾನ ಗೆದ್ದಿರಲಿಲ್ಲ. ಎನ್‌ಡಿಎ ಮೈತ್ರಿಕೂಟ ಬಿಜೆಪಿ ಮತ್ತು ಜನತಾ ದಳ (ಯುನೈಟೆಡ್) ಕ್ರಮವಾಗಿ 17 ಮತ್ತು 16 ಸ್ಥಾನಗಳನ್ನು ಗೆದ್ದವು.
ಬಿಜೆಪಿ 24.1% ಮತಗಳನ್ನು ಗಳಿಸಿದ್ದರೆ, JD(U) 22.3% ಮತಗಳನ್ನು ಪಡೆದಿತ್ತು. ಅವಿಭಜಿತ ಎಲ್‌ಜೆಪಿ 8% ಮತಗಳ ಹಂಚಿಕೆಯೊಂದಿಗೆ ಆರು ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ಸಿಗೆ ಕೇವಲ 7.9% ಮತಗಳನ್ನು ಗಳಿಸಲು ಸಾಧ್ಯವಾಯಿತು.
ಮತ್ತೊಂದೆಡೆ, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಘಟಕಗಳ ಪೈಕಿ ಬಿಜೆಪಿ 17 ಸ್ಥಾನಗಳಲ್ಲಿ ಮತ್ತು ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಆವಾಮ್ ಮೋರ್ಚಾ (ಎಚ್‌ಎಎಂ) ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ (ಎಚ್‌ಎಎಂ) RLSP) ತಲಾ ಒಂದು ಸ್ಥಾನಕ್ಕೆ ಸ್ಪರ್ಧಿಸಲಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ