ಸುಮಲತಾ ಭೇಟಿ ಮಾಡಿದ ವಿಜಯೇಂದ್ರ : ಭೇಟಿ ನಂತರ ಸುಮಲತಾ ಹೇಳಿದ್ದೇನು..?

ಬೆಂಗಳೂರು : ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಂಡ್ಯದ ಸಂಸದೆ ಸುಮಲತಾರನ್ನು ಶುಕ್ರವಾರ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೆಂಬಲಿಸುವಂತೆ ಅವರು ಮನವಿ ಮಾಡಿದ್ದಾರೆ. ಪ್ರೀತಂ ಗೌಡ ಅವರ ಜೊತೆ ಸುಮಲತಾ ನಿವಾಸಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧಕ್ಷ ವಿಜಯೇಂದ್ರ ಬಿಜೆಪಿ ಸೇರ್ಪಡೆಯಾಗುವಂತೆ ಮನವಿ ಮಾಡಿದರು.
ಈ ಬಾರಿ ಬಿಜೆಪಿಯಿಂದ ಸುಮಲತಾ ಅವರಿಗೆ ಮಂಡ್ಯ ಟಿಕೆಟ್ ಸಿಗಲಿದೆ ಎಂದು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ಸುಮಲತಾ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಮಂಡ್ಯದಿಂದ ಟಿಕೆಟ್ ಬೇಡಿಕೆ ಇಟ್ಟಿದ್ದರು. ಆದರೆ, ಮೈತ್ರಿ ಕಾರಣದಿಂದಾಗಿ ಅವರಿಗೆ ಟಿಕೆಟ್ ಕೈತಪ್ಪಿದೆ.

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಆಗುತ್ತಿದ್ದಂತೆಯೇ ಸುಮಲತಾ ಅವರು ಯಾವುದೇ ಸಭೆಯಲ್ಲೂ ಭಾಗಿಯಾಗಿರಲಿಲ್ಲ. ತಮ್ಮ ಬೆಂಬಲಿಗರ ಸಭೆ ಕರೆದು, ತೀರ್ಮಾನ ತಗೆದುಕೊಳ್ಳೋದಾಗಿ ತಿಳಿಸಿದ್ದರು. ಶನಿವಾರ (ಮಾರ್ಚ್‌ ೩೦) ಬೆಂಬಲಿಗರ ಸಭೆ ಕರೆದಿದ್ದಾರೆ. ಅದಕ್ಕೂ ಮುನ್ನ ವಿಜಯೇಂದ್ರ ಭೇಟಿ ಮಾಡಿ ಸುಮಾರು ಒಂದು ತಾಸುಗಳ ಕಾಲ ಚರ್ಚೆ ನಡೆಸಿರುವುದು ಮಹತ್ವ ಪಡೆದಿದೆ.
ವಿಜಯೇಂದ್ರ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅವರು, ವಿಜಯೇಂದ್ರ, ಪ್ರೀತಂಗೌಡ ಅವರು ಭೇಟಿ ಮಾಡಿ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು. ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಆಹ್ವಾನ ನೀಡಿದರು ಎಂದರು.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗೆ ಒಂದು ವಾರ ಮುನ್ನ ಎನ್‌ ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ

ನಾಳೆ, ಶನಿವಾರ ಬೆಂಬಲಿಗರ ಸಭೆ ಕರೆದಿದ್ದೇನೆ. ಅವರ ಭಾವನೆಯನ್ನು ಕೇಳಬೇಕಾದದು ನನ್ನ ಕರ್ತವ್ಯ. ನನ್ನ ಬೆಂಬಲಿಗರನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕಾರ್ಯಕರ್ತರ ಅಭಿಪ್ರಾಯ ಏನು ಎಂಬುದನ್ನು ಕೇಳಿದ ನಂತರದಲ್ಲಿ ಮಂಡ್ಯದಲ್ಲಿಯೇ ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ ಎಂದರು.
ಆದರೆ ನಾನು ಮಂಡ್ಯ ಬಿಟ್ಟರೆ ಮತ್ತೆಲ್ಲೂ ಹೋಗುತ್ತಿಲ್ಲ. ನನ್ನ ಅಸ್ತಿತ್ವ ಅಂದರೆಮಂಡ್ಯ. ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಹಾಗೆ ಹೋಗುವುದಿದ್ದರೆ ಸುಲಭವಾಗಿ ಗೆಲ್ಲುವ ಬೇರೆ ಕ್ಷೇತ್ರದ ಆಫರ್ ಇತ್ತು. ಬೇರೆ ಪಕ್ಷದಿಂದಲೂ ಆಫರ್ ಇತ್ತು. ಆದರೆ ಮಂಡ್ಯವೇ ನನಗೆ ಮುಖ್ಯ ಎಂದರು. ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡಿದ್ದರ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಮುಂಬೈ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ

ಯಾವುದೇ ಆಫರ್ ಅನ್ನು ಕೇಳಿ ಪಡೆಯುವ ಅಭ್ಯಾಸ ನನಗೆ ಇಲ್ಲ. ಆದರೆ ಬಿಜೆಪಿ ಮಂಡ್ಯ ಕ್ಷೇತ್ರ ಬಿಟ್ಟು ಕೊಡುವ ಬದಲು ತನ್ನಲ್ಲಿಯೇ ಉಳಿಸಿಕೊಳ್ಳಬೇಕಿತ್ತು ಎಂದು ಹೇಳಿದ ಅವರು, ಮುಗಿದ ವಿಷಯಗಳನ್ನು ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ತನ್ನ ನಿಲುವು ಬಹಿರಂಗಪಡಿಸುತ್ತೇನೆ ಎಂದರು. ಕುಮಾರಸ್ವಾಮಿ ಭೇಟಿ ಮಾಡಲು ಇಚ್ಛಿಸಿರುವ ಕುರಿತು ಪ್ರತಿಕ್ರಿಯಿಸಿದ ಸುಮಲತಾ, ಅವರನ್ನು ಭೇಟಿ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement