ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುವಂತೆ ಭಕ್ತರು ಒತ್ತಾಯಿಸಿದ್ದು, ಶೀಘ್ರದಲ್ಲಿ I ಈ ಬಗ್ಗೆ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಧಾರವಾಡದಲ್ಲಿ ಮಂಗಳವಾರ ನಡೆದ ಭಕ್ತರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಾನೇ ಸ್ಪರ್ಧೆ ಮಾಡುವಂತೆ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ, ಯಾವ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಶೀಘ್ರವೇ ಬೆಂಗಳೂರಿನಲ್ಲಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಲ್ಹಾದ ಜೋಶಿ ಬದಲಾವಣೆ ಮಾಡಬೇಕು ಎಂದು ಕೇಳಿದ್ದೆ. ಅವರನ್ನು ಬದಲಾವಣೆ ಮಾಡುವುದಿಲ್ಲ ಎಂದು ಬಿಜೆಪಿ ಹೇಳಿದೆ. ಹೀಗಾಗಿ, ಹೋರಾಟಕ್ಕೆ ಮುಂದಾಗಿದ್ದೇನೆ ಎಂದರು.
ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇದು ಜೋಶಿ ಅವರ ವ್ಯಕ್ತಿತ್ವ, ನಡೆ-ನುಡಿ ವಿರುದ್ಧದ ಹೋರಾಟ ಎಂದು ಉತ್ತರಿಸಿದರು. ಈ ಬಗ್ಗೆ ಮಠದ ಗುರುಗಳು, ಪ್ರಮುಖರ ಅಭಿಪ್ರಾಯ ಪಡೆಯುತ್ತೇನೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಗಬೇಕೆಂದು ಭಕ್ತರು ಹೇಳಿದ್ದಾರೆ. ಉತ್ತರ ಭಾರತದಲ್ಲಿ ಸ್ವಾಮೀಜಿಗಳು ರಾಜಕಾರಣದಲ್ಲಿ ಇದ್ದಂತೆಯೇ ದಕ್ಷಿಣ ಭಾರತದಲ್ಲಿ ಸ್ವಾಮೀಜಿಗಳು ರಾಜಕಾರಣಕ್ಕೆ ಬರಬೇಕೆಂದು ಭಕ್ತರು ಸಲಹೆ ನೀಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಭಕ್ತರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ