ಬೆಂಗಳೂರು: ಅನಾಮಿಕ ವ್ಯಕ್ತಿಯೊಬ್ಬರು ರೇಜರ್ ಹಿಡಿದು ಹೈಕೋರ್ಟ್‌ನ ಕೋರ್ಟ್ ಹಾಲ್ 1ಕ್ಕೆ ಪ್ರವೇಶಿಸಿ ನ್ಯಾಯಕ್ಕಾಗಿ ಮನವಿ ಮಾಡಿ ಕುತ್ತಿಗೆ ಕತ್ತರಿಸಿಕೊಳ್ಳಲು ಪ್ರಯತ್ನಿಸಿದ ವಿಲಕ್ಷಣ ಘಟನೆ ಕರ್ನಾಟಕ ಹೈಕೋರ್ಟ್ ಬುಧವಾರ ನಡೆದಿದೆ.
ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಡಾ. ಎಚ್. ಬಿ. ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮೈಸೂರಿನ ಶ್ರೀನಿವಾಸ ಎನ್ನಲಾಗಿದೆ. ಆಪರೇಷನ್ ಥಿಯೇಟರ್‌ನಲ್ಲಿ ಬಳಸುತ್ತಿದ್ದ ಬ್ಲೇಡ್ ತಂದು ಈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪೀಠದ ಮುಂದೆ ಏಕಾಏಕಿ ಬಂದ ವ್ಯಕ್ತಿ ದಾಖಲೆಗಳನ್ನು ನ್ಯಾಯಾಲಯದ ಅಧಿಕಾರಿಗೆ ಸಲ್ಲಿಸಿ, ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ ನಂತರ ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ರೇಜರ್ ತೆಗೆದು ಕುತ್ತಿಗೆ ಕೊಯ್ದುಕೊಳ್ಳಲು ಮುಂದಾದರು.
ಸುತ್ತಲಿದ್ದ ವಕೀಲರು ಅವರನ್ನು ತಡೆದು, ಪೊಲೀಸರಿಗೆ ಒಪ್ಪಿಸಿದರು. ಕುತ್ತಿಗೆ ಕುಯ್ದುಕೊಂಡ ವ್ಯಕ್ತಿಯನ್ನು ವೈದ್ಯರ ಬಳಿಗೆ ಕರೆದೊಯ್ಯಲು ನ್ಯಾಯಮೂರ್ತಿಗಳು ಪೊಲೀಸರಿಗೆ ಸೂಚಿಸಿದರು. ಈ ವ್ಯಕ್ತಿಯನ್ನು ಪೊಲೀಸರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ಪೀಠ ಸ್ಥಳದಲ್ಲಿದ್ದ ವಕೀಲರಿಗೆ “ರೇಜರ್ ಮುಟ್ಟಬೇಡಿ. ಸ್ಥಳದ ಪಂಚನಾಮೆ ನಡೆಸಬೇಕಾಗುತ್ತದೆ. ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರನ್ನು ಬರ ಹೇಳಿ” ಎಂದರು.
ಈ ನಡುವೆ, ನ್ಯಾ. ಶಾಸ್ತ್ರಿ ಅವರು “ರೇಜರ್ ಹಿಡಿದು ಕೋರ್ಟ್ ಹಾಲ್‌ಗೆ ಬರಲು ಭದ್ರತಾ ಸಿಬ್ಬಂದಿ ದಾಟಿ ಹೇಗೆ ಬಂದ? ರೇಜರ್ ಅನ್ನು ಮುಟ್ಟಬೇಡಿ. ಹೈಕೋರ್ಟ್ ಪೊಲೀಸರು ಎಲ್ಲಿ ಹೋಗಿದ್ದಾರೆ?” ಎಂದು ಪ್ರಶ್ನಿಸಿದರು.
ವ್ಯಕ್ತಿ ನೀಡಿದ ಕಡತವನ್ನು ಪಡೆದ ಕೋರ್ಟ್ ಅಧಿಕಾರಿಗೂ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಶಾಸ್ತ್ರಿ ಅವರು, ಆತ ನೀಡಿದ ಕಡತವನ್ನು ನೀವೇಕೆ ಸ್ವೀಕರಿಸಿದ್ದೀರಿ. ಅದನ್ನು ಪಡೆದು ಬಳಿಕ ಕೆಳಗೆ ಇಟ್ಟಿದ್ದೀರಿ. ಹೀಗಾಗಿ, ನಿಮ್ಮ ಬೆರಳಚ್ಚನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಕೋರ್ಟ್ ಅಧಿಕಾರಿಯು ಯಾವುದೇ ದಾಖಲೆ ಸ್ವೀಕರಿಸುವಂತಿಲ್ಲ ಎಂದು ಹೇಳಿದರು.
ವಕೀಲರು ಕಡತ ನೀಡಿದ್ದರೆ ನಾವು ನೋಡಬಹುದಿತ್ತು. ಆದರೆ, ಅದನ್ನು ವ್ಯಕ್ತಿಯೊಬ್ಬರು ನೀಡಿದ್ದಾರೆ. ಆದ್ದರಿಂದ ಸದ್ಯಕ್ಕೆ ಅದು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಪ್ರಭಾಕರ್ ಶಾಸ್ತ್ರಿ ಹೇಳಿದರು. ಈ ವೇಳೆ ಸರ್ಕಾರದ ವಕೀಲ ಎಸ್ ಎಸ್ ಮಹೇಂದ್ರ ಅವರು ಪ್ರಕರಣವನ್ನು ವ್ಯಾಪ್ತಿಯ ಪೊಲೀಸರಿಗೆ ತಿಳಿಸುವುದು ಸೂಕ್ತ ಎಂದು ಹೇಳಿದರು. ಬಳಿಕ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರು ರಿಜಿಸ್ಟ್ರಾರ್ ಜನರಲ್‌ಗೆ ಘಟನೆಯ ಮಾಹಿತಿ ನೀಡಿ ಕಲಾಪವನ್ನು ಮುಕ್ತಾಯ ಗೊಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ