ಹಿರಿಯ ನಾಯಕ ಸಂಜಯ ನಿರುಪಮ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್‌

ನವದೆಹಲಿ: ‘ಅಶಿಸ್ತು’ ಮತ್ತು ‘ಪಕ್ಷ ವಿರೋಧಿ ಹೇಳಿಕೆ’ಗಾಗಿ ಹಿರಿಯ ನಾಯಕ ಸಂಜಯ ನಿರುಪಮ ಅವರನ್ನು ಕಾಂಗ್ರೆಸ್ ಬುಧವಾರ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.
ಅಶಿಸ್ತು ಮತ್ತು ಪಕ್ಷ ವಿರೋಧಿ ಹೇಳಿಕೆಗಳ ದೂರುಗಳನ್ನು ಗಮನಿಸಿ ಕಾಂಗ್ರೆಸ್ ಅಧ್ಯಕ್ಷರು ಸಂಜಯ ನಿರುಪಮ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಆದೇಶದಲ್ಲಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಶಿವಸೇನೆ (ಯುಬಿಟಿ) ಯೊಂದಿಗೆ ಸೀಟು ಹಂಚಿಕೆ ಮಾತುಕತೆಗಳ ಮಧ್ಯೆ ಕಾಂಗ್ರೆಸ್ಸಿನ ಮಹಾರಾಷ್ಟ್ರದ ನಾಯಕತ್ವದ ಮೇಲೆ ವಾಗ್ದಾಳಿ ನಡೆಸಿದ ಕೆಲವು ದಿನಗಳ ನಂತರ ಮಾಜಿ ಸಂಸದ ಸಂಜಯ ನಿರಪಮ ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಲಾಯಿತು.
ಇದಕ್ಕೂ ಮುನ್ನ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ನಿರುಪಮ ವಿರುದ್ಧ ಪಕ್ಷವು ಶಿಸ್ತು ಕ್ರಮ ಕೈಗೊಂಡಿದೆ ಎಂದು ಹೇಳಿದ್ದರು.

“ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು, ಆದರೆ ಅದನ್ನು ರದ್ದುಗೊಳಿಸಲಾಗಿದೆ. ಅವರು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಟೋಲೆ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ, ಸಂಜಯ ನಿರುಪಮ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ ನಲ್ಲಿ, ಕಾಂಗ್ರೆಸ್ ‘ಶಕ್ತಿಯನ್ನು ವ್ಯರ್ಥ ಮಾಡಬಾರದು’ ಎಂದು ಹೇಳಿದ್ದಾರೆ. “ಪಕ್ಷವು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ, ಅದು (ಕಾಂಗ್ರೆಸ್) ತನ್ನನ್ನು ಉಳಿಸಿಕೊಳ್ಳಲು ಲೇಖನ ಸಾಮಗ್ರಿ ಮತ್ತು ಶಕ್ತಿಯನ್ನು ಬಳಸಿಕೊಳ್ಳಬೇಕು. ನಾನು ಪಕ್ಷಕ್ಕೆ ನೀಡಿದ್ದ ಕಾಲಮಿತಿ ಇಂದಿಗೆ ಮುಗಿಯುತ್ತದೆ. ನನ್ನ ಮುಂದಿನ ಕ್ರಮವನ್ನು ನಾಳೆ ತಿಳಿಸುತ್ತೇನೆ ಎಂದು ಮಾಜಿ ಸಂಸದರು ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮುಂಬೈನ ಆರು ಲೋಕಸಭಾ ಸ್ಥಾನಗಳ ಪೈಕಿ ನಿರುಪಮ ಅವರು ಸ್ಪರ್ಧಿಸಲು ಬಯಸಿದ್ದ ಮುಂಬೈ ವಾಯುವ್ಯ ಕ್ಷೇತ್ರ ಸೇರಿದಂತೆ ನಾಲ್ಕು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ನಂತರ ನಿರುಪಮ ಅವರು ಮಹಾರಾಷ್ಟ್ರ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿದರು, ಮುಂಬೈನಲ್ಲಿ ಏಕಪಕ್ಷೀಯವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಶಿವಸೇನೆ (ಯುಬಿಟಿ) ನಿರ್ಧಾರವನ್ನು ಒಪ್ಪಿಕೊಳ್ಳುವುದು ಕಾಂಗ್ರೆಸ್ ನಾಶಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ನಿರುಪಮ ಹೇಳಿದ್ದರು. 2014ರ ಚುನಾವಣೆಯಲ್ಲಿ ಮುಂಬೈ ವಾಯುವ್ಯ ಕ್ಷೇತ್ರದಿಂದ ಬಿಜೆಪಿಯ ಗೋಪಾಲ ಶೆಟ್ಟಿ ವಿರುದ್ಧ ನಿರುಪಮ ಸೋತಿದ್ದರು.
ಅವರು ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ ಆದರೆ ಶಿವಸೇನೆ (ಯುಬಿಟಿ) ತನ್ನ ಅಭ್ಯರ್ಥಿಗಳನ್ನು ಅಲ್ಲಿಂದ ಕಣಕ್ಕಿಳಿಸುವ ಮೂಲಕ ಅವರ ಆಸೆಗೆ ತಣ್ಣೀರೆರಚಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement