ದೆಹಲಿಗೆ ಹೋದರೂ ಈಶ್ವರಪ್ಪ ಭೇಟಿಯಾಗದ ಅಮಿತ್‌ ಶಾ….!

ಬೆಂಗಳೂರು: ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಆಹ್ವಾನದ ಮೇರೆಗೆ ಬುಧವಾರ ದೆಹಲಿಗೆ ತೆರಳಿದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಸ್‌ ಬಂದಿದ್ದಾರೆ.
ಮಂಗಳವಾರ ದೂರವಾಣಿ ಕರೆ ಮಾಡಿದ್ದ ಅಮಿತ್‌ ಶಾ ಅವರು ತಮಗೆ ಬುಧವಾರ ದೆಹಲಿಗೆ ಬರುವಂತೆ ಸೂಚಿಸಿದ್ದರು ಎಂಬುದಾಗಿ ಈಶ್ವರಪ್ಪ ಹೇಳಿದ್ದರು. ಆದರೆ ದೆಹಲಿಗೆ ತೆರಳಿದ ಈಶ್ವರಪ್ಪ ಅವರಿಗೆ ಭೇಟಿಯಾಗುವ ಅವಶ್ಯಕತೆಯಿಲ್ಲ ಎಂಬುದಾಗಿ ಅಮಿತ್‌ ಶಾ ಕಚೇರಿಯಿಂದ ಸಂದೇಶ ರವಾನೆಯಾಗಿದ್ದರಿಂದ ಅವರಿಗೆ ಭೇಟಿ ಸಾಧ್ಯವಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ ಅವರು, ‘‘ಬುಧವಾರ ದೆಹಲಿಗೆ ಬರುವಂತೆ ಅಮಿತ್‌ ಶಾ ಸೂಚನೆಯಂತೆ ದೆಹಲಿಗೆ ತೆರಳಿದ್ದೆ. ನಾನು ಅಲ್ಲಿಗೆ ಹೋಗದಿದ್ದರೆ ಅವರು ನನ್ನನ್ನು ದುರಹಂಕಾರಿ ಎಂದು ಭಾವಿಸಬಹುದಿತ್ತು. ಹೀಗಾಗಿ ನಾನು ದೆಹಲಿ ಹೋಗಿದ್ದೆ. ನನಗೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಾನು ಕೆಲವು ಪ್ರಶ್ನೆಗಳನ್ನು ಕೇಳಿದ್ದರಿಂದ ಸಭೆ ನಡೆಯಲಿಲ್ಲ ಎಂದು ಭಾವಿಸುತ್ತೇನೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಕಷ್ಟವಾಗಿತ್ತು” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಸದ್ಯ ಭೇಟಿ ಸಾಧ್ಯವಾಗುವುದಿಲ್ಲ ಎಂಬುದಾಗಿ ಅಮಿತ್‌ ಶಾ ಅವರ ಕಚೇರಿಯವರು ಕರೆ ಮಾಡಿ ಹೇಳಿದರು. ಇದರ ಅರ್ಥ ನಾನು ಚುನಾವಣೆಯಲ್ಲಿಸ್ಪರ್ಧಿಸಬೇಕು ಎಂಬುದಾಗಿದೆ ಎಂದು ಹೇಳಿದರು.
ಅಮಿತ್‌ ಶಾ ಅವರು ಭೇಟಿಗೆ ಸಿಗದಿರುವುದಕ್ಕೆ ಇದೇ ಕಾರಣ. ಅವರು ನನ್ನನ್ನು ಭೇಟಿಯಾಗಿದ್ದರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೆ. ಆದರೆ, ಅಮಿತ್‌ ಶಾ ಅವರು ಸಿಕ್ಕಿಲ್ಲ ಎಂಬುದು ನಾನು ಚುನಾವಣೆಯಲ್ಲಿ ನಿಲ್ಲಬೇಕು ಎಂಬುದುರ ಸೂಚನೆಯಾಗಿದೆ. ರಾಘವೇಂದ್ರ ವಿರುದ್ಧ ಗೆಲ್ಲಬೇಕು ಎಂಬುದಾಗಿದೆ. ಹಾಗಾಗಿ ನಾನು ವಾಪಸ್‌ ಹೋಗುತ್ತಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ತಿಳಿಸಿದರು.
ನಾನು ನ್ಯಾಯಕ್ಕಾಗಿ ಹೋರಾಡುತ್ತಿರುವುದರಿಂದ ನಾನು ಈಗ ಮಾಡಿದ್ದು ಸಮರ್ಥನೀಯ ಎಂದು ಶಾ ಭಾವಿಸಿರಬೇಕು ಎಂದು ಅವರು ಹೇಳಿದ್ದಾರೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement