ಲೋಕಸಭೆ ಚುನಾವಣೆ: ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ; ದಿಂಗಾಲೇಶ್ವರ ಸ್ವಾಮೀಜಿ ಘೋಷಣೆ

ಬೆಂಗಳೂರು : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಧಾರವಾಡದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜಕೀಯ ರಂಗವನ್ನು ಪ್ರವೇಶಿಸುತ್ತೇಣೆ ಎಂದು ಹೇಳಿದರು. ಅಧಿಕಾರದ ಮತ್ತು ಸಂಪತ್ತಿನ ಮದದಲ್ಲಿ ಪ್ರಹ್ಲಾದ ಜೋಶಿ ಮೆರೆಯುತ್ತಿದ್ದಾರೆ. ಅವರ ಚೇಲಾಗಳು ನನ್ನ ವಿರುದ್ಧ ಷಡ್ಯಂತ್ರ ರಚಿಸಿ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೋಷಿ ಅವರ ಯಾವ ಕುತಂತ್ರವೂ ನಮ್ಮ ಮುಂದೆ ನಡೆಯುವುದಿಲ್ಲ ಎಂದರು.
ಪ್ರಹ್ಲಾದ ಜೋಶಿ ದುರಾಡಳಿತ ಬಗ್ಗೆ ಹೈಕಮಾಂಡ್ ನಾಯಕರು ಗಮನಹರಿಸುತ್ತಿಲ್ಲ, ಹೀಗಾಗಿ ನಾನು ರಾಜಕೀಯ ಪ್ರವೇಶ ಮಾಡಬೇಕಾಯಿತು. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷದ ವಿರುದ್ಧ ಸ್ವಾಭಿಮಾನದ ಯುದ್ಧ ಆಗಿದೆ. ಇದು ಮತದಾರರು ಮಾಡಿದ ತೀರ್ಮಾನ ಆಗಿದೆ. ಹೀಗಾಗಿ ನನಗೆ ಸ್ಪರ್ಧೆ ಮಾಡುವಂತೆ ಮತದಾರರು ಒತ್ತಾಯಿಸಿದ್ದಾರೆ ಎಂದರು.

ಯಡಿಯೂರಪ್ಪ ಅವರು ನನ್ನ ಜೊತೆಗೆ ಮಾತನಾಡಿದ್ದಾರೆ. ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ನನಗೆ ಮನವಿ ಮಾಡಿದ್ದಾರೆ. ಆದರೆ, ಕೆಲವರು ನನ್ನ ಸ್ಪರ್ಧೆ ಹಿಂದೆ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ ಕೈವಾಡ ಇದೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ಸುಳ್ಳು.. ನನ್ನದು ದುರಾಡಳಿತ ಹಾಗೂ ಅಹಂಕಾರದ ವಿರುದ್ಧದ ಹೋರಾಟ. ನನ್ನ ವಿರುದ್ಧ ಯಾರೇ ಮಠಾಧೀಶರು ಹೇಳಿಕೆ ಕೊಟ್ಟಿದ್ದರೂ ಅದು ಪ್ರಹ್ಲಾದ ಜೋಶಿ ಅವರ ಭಯಕ್ಕೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಸಮಾಜವನ್ನು ತುಳಿದು ಆಳುವ ವಿಷಯದಲ್ಲಿ ಧಾರವಾಡ ಸಂಸದ ಪ್ರಹ್ಲಾದ ಜೋಶಿಯವರ ಪಾತ್ರ ಎದ್ದು ಕಾಣುತ್ತದೆ. ಹಾವೇರಿ ಕ್ಷೇತ್ರದಲ್ಲಿ ಕೆ.ಎಸ್‌. ಈಶ್ವರಪ್ಪ ಅವರ ಮಗನಿಗೆ ಟಿಕೆಟ್‌ ತಪ್ಪಿಸಿದ್ದು ಇದೇ ಜೋಶಿ’ ಎಂದು ಆರೋಪಿಸಿದರು.

ಪ್ರಮುಖ ಸುದ್ದಿ :-   ಹಾಸನದಲ್ಲಿ ಹಾಡಹಗಲೇ ಗುಂಡಿನ ಸದ್ದು; ಇಬ್ಬರು ಸಾವು, ಒಬ್ಬನ ಹತ್ಯೆಗೈದು ಮತ್ತೊಬ್ಬ ಆತ್ಮಹತ್ಯೆ ಮಾಡಿಕೊಂಡ ಶಂಕೆ

ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯನ್ನು ಫಿಕ್ಸಿಂಗ್‌ ಮಾಡಿಕೊಂಡಿವೆ ಎಂದು ಜನರು ಮಾತನಾಡುತ್ತಿದ್ದಾರೆ. ಇದು ಮತದಾರರಿಗೆ ಮಾಡುವ ಮೋಸವಾಗಿದೆ. ಪಕ್ಷೇತರನಾಗಿ ನನ್ನ ಸ್ಪರ್ಧೆ ಕಾಂಗ್ರೆಸ್‌ ಮತ್ತು ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಮತ್ತು ಸ್ವಾರ್ಥಿ ರಾಜಕಾರಣಿಗಳ ದುರಾಡಳಿತದ ವಿರುದ್ಧ ಸ್ವಾಭಿಮಾನಿಗಳ ಧರ್ಮ ಯುದ್ದ ಎಂದು ಬಣ್ಣಿಸಿದರು.
ನಾನು ಭಾವೈಕ್ಯ ಪೀಠದ ಸ್ವಾಮೀಜಿ ಆಗಿರುವುದರಿಂದ ನಾನು ಯಾವುದೇ ಜಾತಿ ಟೀಕಿಸುವುದಿಲ್ಲ. ಯಾವುದೇ ಜಾತಿಗೂ ಅಭಿಮಾನ ತೋರಿಸುವುದಿಲ್ಲ, ನಾನು ಯಾವುದೇ ಸಮುದಾಯದ ವಿರುದ್ಧವೈ ಇಲ್ಲ. ಇದು ಅಹಂಕಾರದ ವಿರುದ್ಧದ ಹೋರಾಟ ಎಂದು ಹೇಳಿದರು.
ಪಕ್ಷಗಳಿಗೆ ಮತದಾರರು ಅನಿವಾರ್ಯವೇ ಹೊರತು ಮತದಾರರಿಗೆ ಪಕ್ಷಗಳು ಅನಿವಾರ್ಯವಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಬಸವಾದಿ ಶಿವಶರಣರನ್ನು ಮತ ಗಳಿಕೆಗೆ ಬಳಕೆ ಮಾಡಿಕೊಂಡಿವೆ, ಆದರೆ ಅವರ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿವೆ’ ಎಂದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement