ಹರಿಯಾಣದ ನರ್ನಾಲ್ ನಲ್ಲಿ ಗುರುವಾರ ಬೆಳಗ್ಗೆ ಶಾಲಾ ಬಸ್ ಪಲ್ಟಿಯಾದ ಪರಿಣಾಮ ಆರು ಮಕ್ಕಳು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜಿಎಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ ಬಸ್ ಕನಿನಾದ ಉನ್ಹಾನಿ ಗ್ರಾಮದ ಬಳಿ ಪಲ್ಟಿಯಾಗಿದೆ. ಈದ್-ಉಲ್-ಫಿತರ್ ರಜೆಯ ಹೊರತಾಗಿಯೂ ಶಾಲೆಯು ಕಾರ್ಯನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಡಳಿತದ ಪ್ರಕಾರ, ಗಾಯಗೊಂಡ 12 ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ರೋಹ್ಟಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಾಥಮಿಕ ತನಿಖೆಯ ನಂತರ ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಆತ ಕುಡಿದಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಚಾಲಕನ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದೇವೆ. ಎಂದು ಹಿರಿಯ ಪೊಲೀಸ್ ಅಧಿಕಾರಿ ಅರ್ಶ್ ವರ್ಮಾ ತಿಳಿಸಿದ್ದಾರೆ. ಅಪಘಾತದ ಕುರಿತು ಪೊಲೀಸರು ಇದೀಗ ಶಾಲೆಯ ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಅಪಘಾತ ಸ್ಥಳಕ್ಕೆ ತೆರಳುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬನ ಪೋಷಕರಿಗೂ ಗಾಯಗಳಾಗಿವೆ. ಅಪಘಾತದಲ್ಲಿ ವಿದ್ಯಾರ್ಥಿನಿಯ ತಾಯಿಯ ಕಾಲು ಮುರಿದಿದ್ದರೆ, ಆಕೆಯ ಸಹೋದರಿ ಸಾವಿಗೀಡಾಗಿದ್ದಾರೆ. ಶಾಲೆಯು ರಜೆಯಲ್ಲಿ ಏಕೆ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯ ಶಿಕ್ಷಣ ಸಚಿವೆ ಸೀಮಾ ತ್ರಿಖಾ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ