ಲೋಕಸಭೆ ಚುನಾವಣೆ: ಇಂದಿರಾ ಗಾಂಧಿ ಹಂತಕನ ಪುತ್ರ ಫರೀದ್‌ಕೋಟದಿಂದ ಸ್ಪರ್ಧೆ

ನವದೆಹಲಿ : 2024ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಫರೀದ್‌ಕೋಟ್‌ ಕ್ಷೇತ್ರದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹಂತಕರಲ್ಲಿ ಒಬ್ಬನಾಗಿದ್ದ ಬಿಯಾಂತ್‌ ಸಿಂಗ್‌ ಪುತ್ರನಾದ ಸರಬ್‌ಜಿತ್‌ ಸಿಂಗ್‌ ಖಲ್ಸಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಪಿಯುಸಿ ಡ್ರಾಪ್‌ ಔಟ್‌ 45 ವರ್ಷದ ಸರಬ್‌ಜಿತ್‌ ಸಿಂಗ್‌ ಖಲ್ಸಾ ಅವರು 2009 ರಲ್ಲಿ ಭಟಿಂಡಾ, 2014 ರಲ್ಲಿ ಫತೇಗಢ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಒಮ್ಮೆ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಪ್ರಧಾನಮಂತ್ರಿಯ ಅಂಗರಕ್ಷಕ ಪಡೆಯಲ್ಲಿದ್ದ ಬಿಯಾಂತ್‌ ಸಿಂಗ್‌ ಮತ್ತು ಸತ್ವಂತ್‌ ಸಿಂಗ್‌ 1984ರ ಅಕ್ಟೋಬರ್ 31 ರಂದು ಇಂದಿರಾ ಗಾಂಧಿ ಅವರನ್ನು ಗುಂಡಿ ಹಾರಿಸಿ ಹತ್ಯೆಗೈದಿದ್ದರು. ಬಿಯಾಂತ್ ಸಿಂಗ್‌ನನ್ನು ಭದ್ರತಾ ಪಡೆಗಳುಕೊಂದು ಹಾಕಿದ್ದವು. ಸತ್ವಂತ್ ಸಿಂಗ್‌ನನ್ನು ಬಂಧಿಸಲಾಗಿತ್ತು. ಬಳಿಕ ಆತನಿಗೆ ಮರಣ ದಂಡನೆ ವಿಧಿಸಲಾಗಿತ್ತು.

ಮೊಹಾಲಿಯಲ್ಲಿ ನೆಲೆಸಿರುವ ಸರಬ್ಜಿತ್ ಸಿಂಗ್, 2004ರಲ್ಲಿ ಬಟಿಂಡಾದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 1,13,490 ಮತಗಳನ್ನು ಪಡೆದಿದ್ದರು. 2007ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಭಾದೌರ್ ಕ್ಷೇತ್ರದಿಂದ ಕಣಕ್ಕಿಳಿದು 15,702 ಮತಗಳನ್ನು ಗಳಿಸಿದ್ದರು.
2014ರ ಲೋಕಸಭೆ ಚುನಾವಣೆಯಲ್ಲಿ ಫತೇಗಢ ಸಾಹಿಬ್ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರಿಗೆ ಕೇವಲ 12,683 ಮತಗಳು ದೊರಕಿದ್ದವು. 1989ರ ಲೋಕಸಭೆ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ (ಮಾನ್) ಪಕ್ಷದ ಅಭ್ಯರ್ಥಿಯಾಗಿ ರೋಪರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸರಬ್‌ಜಿತ್ ಅವರ ತಾಯಿ ಬಿಮಲ್ ಕೌರ್ ಖಲ್ಸಾ ಹಾಗೂ ಬಟಿಂಡಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಜ್ಜ ಸುಚಾ ಸಿಂಗ್ ಅವರು ಗೆಲುವು ಕಂಡಿದ್ದರು. ಫರೀದ್‌ಕೋಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಸಾದಿಕ್ ಹಾಲಿ ಸಂಸದರಾಗಿದ್ದಾರೆ. ಆಮ್ ಆದ್ಮಿ ಪಕ್ಷವು ನಟ ಕರಮ್‌ಜಿತ್ ಸಿಂಗ್ ಅನ್ಮೋಲ್ ಅವರನ್ನು ಕಣಕ್ಕಿಳಿಸಿದ್ದರೆ, ಬಿಜೆಪಿಯು ಗಾಯಕ ಹನ್ಸ್ ರಾಜ್ ಹನ್ಸ್ ಅವರಿಗೆ ಟಿಕೆಟ್ ನೀಡಿದೆ. ಪಂಜಾಬ್‌ನ ಎಲ್ಲಾ 13 ಕ್ಷೇತ್ರಗಳಿಗೆ ಜೂನ್ 1ರಂದು ಮತದಾನ ನಡೆಯಲಿದೆ.

ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement