‘ಹೆಲ್ತ್ ಡ್ರಿಂಕ್ಸ್‌’ ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಇ-ಕಾಮರ್ಸ್‌ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಬೋರ್ನ್‌ವಿಟಾ ಸೇರಿದಂತೆ ಹಲವು ಪಾನೀಯಗಳನ್ನು ‘ಆರೋಗ್ಯ ಪಾನೀಯʼಗಳ (healthy drinks) ವರ್ಗದಿಂದ ತೆಗೆದುಹಾಕುವಂತೆ ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಏಪ್ರಿಲ್ 10 ರಂದು ಸೂಚನೆ ನೀಡಿದೆ. ಇದು ಯಾವುದೇ ‘ಆರೋಗ್ಯ ಪಾನೀಯ’ ವರ್ಗಕ್ಕೆ ಸೇರುವುದಿಲ್ಲ ಎಂದು ತಿಳಿಸಿದೆ.
ಬೋರ್ನ್‌ವೀಟಾ ಸೇರಿದಂತೆ ಇತರ ಕೆಲ ಪಾನೀಯಗಳ ಕುರಿತು ಅಧ್ಯಯನ ನಡೆಸಿರುವ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಆಹಾರ ಸುರಕ್ಷತೆ ಕುರಿತು ವರದಿ ನೀಡಿದೆ. ಅಲ್ಲದೆ, ಎಫ್‌ಎಸ್‌ಎಸ್ ಆಕ್ಟ್ 2006ರ ಅಡಿಯಲ್ಲೂ ಹೆಲ್ತಿ ಡ್ರಿಂಕ್‌ ಅನ್ನು ವ್ಯಾಖ್ಯಾನಿಸಿಲ್ಲ. ಉತ್ತಮ ಪಾನೀಯ ಅಥವಾ ಉತ್ತಮ ಆಹಾರ ಕುರಿತು ವ್ಯಾಖ್ಯಾನ ಅಥವಾ ಪ್ರಮಾಣೀಕೃತ ಇಲ್ಲದಿರುವ ಕಾರಣ ತಕ್ಷಣವೇ ಹೆಲ್ತಿ ಡ್ರಿಂಕ್ ಪಟ್ಟಿಯಿಂದ ಬೋರ್ನ್‌ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವಂತೆ ಇ-ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸೂಚಿಸಿದೆ.

ಎನ್‌ಸಿಪಿಸಿಆರ್‌ನ ತನಿಖೆಯಲ್ಲಿ ಬೋರ್ನ್‌ವಿಟಾದಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಸಕ್ಕರೆ ಮಟ್ಟವನ್ನು ಹೊಂದಿದೆ ಎಂಬುದು ಕಂಡುಬಂದಿದೆ. ಅಲ್ಲದೆ, ಈ ಹಿಂದೆ, ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸಲು ವಿಫಲವಾದ ಮತ್ತು ಪವರ್ ಸಪ್ಲಿಮೆಂಟ್‌ಗಳನ್ನು ‘ಆರೋಗ್ಯ ಪಾನೀಯಗಳು’ ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ‘ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್’ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ಗೆ ಸೂಚಿಸಿತ್ತು.

ಯೂಟ್ಯೂಬರ್ ಒಬ್ಬರು ತಮ್ಮ ವೀಡಿಯೊದಲ್ಲಿ ಪೌಡರ್ ಸಪ್ಲಿಮೆಂಟ್ ಕುರಿತು ವೀಡಿಯೊ ಮಾಡಿದಾಗ ಬೋರ್ನ್‌ವಿಟಾದ ‘ಅನಾರೋಗ್ಯಕರ’ ಅಂಶದ ಬಗ್ಗೆ ಹೇಳಿದ ನಂತರ ವಿವಾದ ಉಲ್ಬಣಿಸಿತು. ಬೋರ್ನ್ ವಿಟಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಇದೆ ಎಂದು ಅವರು ತಿಳಿಸಿದ್ದರು. ಅಲ್ಲದೆ, ಅದರಲ್ಲಿರುವ ಅತಿಯಾದ ಸಕ್ಕರೆ, ಕೋಕೋ ಮತ್ತು ಹಾನಿಕಾರಕ ಕೃತಕ ಬಣ್ಣಗಳು ಮಕ್ಕಳಲ್ಲಿ ಗಂಭೀರವಾದ ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ಆರೋಪಿಸಿದ್ದರು. ನಂತರ ಸಂಸ್ಥೆಯ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯ ಹೆಚ್ಚಾಗಿತ್ತು. ಈಗ ಬೋರ್ನ್‌ವಿಟಾ ಪೇಯವನ್ನು ‘ಆರೋಗ್ಯ ಪಾನೀಯ’ಗಳ ಪಟ್ಟಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಪ್ರಮುಖ ಸುದ್ದಿ :-   ಎನ್‌ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧೆ : ಬಿಜೆಪಿಯಿಂದ ಭೋಜಪುರಿ ನಟನ ಉಚ್ಛಾಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement