ವೀಡಿಯೊ | ಪೊಲೀಸರ “ನಿಷ್ಕ್ರಿಯತೆ”ಗೆ ಹತಾಶೆಗೊಂಡು ಠಾಣೆಗೆ ಬಂದು ಪೊಲೀಸ್ ಅಧಿಕಾರಿಗೆ ‘ಆರತಿ’ ಮಾಡಿದ ದಂಪತಿ..!. ಆದರೆ…

ಭೋಪಾಲ್: ಮಧ್ಯಪ್ರದೇಶದ ದಂಪತಿ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರಿಯೊಬ್ಬರಿಗೆ ‘ಆರತಿ’ ಮಾಡಿದ್ದಾರೆ…! ಆದರೆ ಇದು ಗೌರವ ಸೂಚಕವಾಗಿ ಮಾಡಿದ್ದಲ್ಲ, ಬದಲಾಗಿ ಕಳ್ಳತನದ ದೂರಿನಲ್ಲಿ ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ತಮ್ಮ ಹತಾಶೆ ತೋರಿಸಲು ದಂಪತಿ ಈ ರೀತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ದಂಪತಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಮಾಲಾರ್ಪಣೆ ಮಾಡಲು ಪ್ರಯತ್ನಿಸಿದರು ಮತ್ತು ಅವರಿಗೆ ಮುಜುಗರವನ್ನುಂಟು ಮಾಡಲು ಶಾಲು ಹೊದಿಸಿದರು. ಕಳೆದ ವಾರ (ಏಪ್ರಿಲ್ 6) ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಟೌನ್ ಇನ್ಸ್‌ಪೆಕ್ಟರ್ ಜೆ.ಪಿ.ಪಟೇಲ್‌ ಎಂಬವರಿಗೆ ಅನುರಾಧಾ ಮತ್ತು ಕುಲದೀಪ್ ಸೋನಿ ಎಂದು ಗುರುತಿಸಲಾದ ದಂಪತಿ ಆರತಿ ಮಾಡಿದ್ದಾರೆ. ಮಹಿಳೆ ತನ್ನ ಪತಿ ಮತ್ತು ಮಗಳೊಂದಿಗೆ ರೇವಾದಲ್ಲಿರುವ ಕೊಟ್ವಾಲಿ ಪೊಲೀಸ್ ಠಾಣೆಗೆ ಪ್ರವೇಶಿಸಿ ಪೊಲೀಸ್ ಅಧಿಕಾರಿಯ ಮುಂದೆ ಆರತಿ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಎನ್‌ಡಿಟಿವಿ ವರದಿ ಪ್ರಕಾರ, ರೇವಾ ಮತ್ತು ಮೌಗಂಜ್ ಜಿಲ್ಲೆಗಳಲ್ಲಿ ಆಭರಣ ಅಂಗಡಿಗಳನ್ನು ಹೊಂದಿರುವ ದಂಪತಿ ಇತ್ತೀಚೆಗೆ ಸುಮಾರು ನಾಲ್ಕು ಕಿಲೋ ಬೆಳ್ಳಿ ನಾಪತ್ತೆಯಾದ ನಂತರ ತಮ್ಮ ಇಬ್ಬರು ಸೇವಕರಾದ ಅರ್ಪಿತ್ ಮತ್ತು ಮುಖೇಶ ಎಂಬವರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಈ ವರ್ಷ ಜನವರಿಯಲ್ಲಿ ರೇವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳು ತಲೆಮರೆಸಿಕೊಂಡಿದ್ದರು. ನಂತರ ಮಧ್ಯಪ್ರದೇಶ ಹೈಕೋರ್ಟ್‌ನಿಂದ ಜಾಮೀನು ಪಡೆದರು.
ಆರೋಪಿಗಳು ಆಪಾದಿತ ಅಪರಾಧದಿಂದ ತಪ್ಪಿಸಿಕೊಳ್ಳುವಂತೆ ತೋರುತ್ತಿದ್ದರಿಂದ ದಂಪತಿ ಅಸಮಾಧಾನಗೊಂಡಿದ್ದರು ಮತ್ತು ಅವರು ಪೊಲೀಸರ ನಿಷ್ಕ್ರಿಯತೆ ಇದಕ್ಕೆ ಕಾರಣ ಎಂದು ದೂಷಿಸಿದರು.  ಪೊಲೀಸರು ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂಬುದು ಅವರ ಆರೋಪ. ಸಾರ್ವಜನಿಕ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರಿಗೆ ನೆನಪಿಸುವ ಉದ್ದೇಶದಿಂದ ದಂಪತಿ ವ್ಯಂಗ್ಯಾತ್ಮಕ ಸೂಚಕವಾಗಿ ಪೊಲೀಸ್‌ ಅಧಿಕಾರಿಗೆ ಆರತಿ ಮಾಡಲು ನಿರ್ಧರಿಸಿ ಠಾಣೆಗೆ ಆಗಮಿಸಿದರು.ಇದು ನಂತರ ದಂಪತಿ ವಿರುದ್ಧವೇ ಪೊಲೀಸ್ ಪ್ರಕರಣಕ್ಕೆ ಕಾರಣವಾಯಿತು ಎಂದು ಎನ್‌ಡಿಟಿವಿ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಶವವಾಗಿ ಪತ್ತೆ

ಕಳ್ಳತನ ಪ್ರಕರಣದ ಕುರಿತು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ ಮತ್ತು ತಮ್ಮ ವಿರುದ್ಧ ದಂಪತಿಯ ಈ ತರಹದ ವರ್ತನೆಯನ್ನು ಅವರು ಟೀಕಿಸಿದ್ದಾರೆ. “ಇದು ನನ್ನನ್ನು ಅವಮಾನಿಸಲು ಮತ್ತು ಆಡಳಿತಾತ್ಮಕ ಕೆಲಸಕ್ಕೆ ಅಡ್ಡಿಪಡಿಸಲು ಉದ್ದೇಶಿದಿಂದ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ಅವರನ್ನು ಉಲ್ಲೇಖಿಸಿದ ಎನ್‌ಡಿಟಿವಿ ವರದಿ ಹೇಳಿದೆ.
“ಅವರು (ದಂಪತಿ) ಪೊಲೀಸ್ ಠಾಣೆಯಲ್ಲಿನ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಯಾವುದೇ ಅನುಮತಿಯಿಲ್ಲದೆ ಇದನ್ನು ಫೇಸ್‌ಬುಕ್ ಲೈವ್ ಮಾಡಿದ್ದಾರೆ. ನಾವು ಅವರನ್ನು ಕುಳಿತು ಚರ್ಚಿಸಲು ಹೇಳಿದೆವು. ಆದರೆ ಅವರು ಕೇಳಲಿಲ್ಲ” ಎಂದು ಪಟೇಲ್ ಹೇಳಿದರು.
ಅಸಾಂಪ್ರದಾಯಿಕ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಇದೀಗ ಪೊಲೀಸರು ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯೊಳಗೆ ನಡೆದ ಘಟನೆಯನ್ನು ಹೈಕೋರ್ಟ್ ಸಹ ಗಮನಿಸಿದ್ದು, ಇದು ಸೂಕ್ತವಲ್ಲ ಎಂದು ಬಣ್ಣಿಸಿದೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಮತದಾನದ ವೇಳೆ ಮತಗಟ್ಟೆಯಲ್ಲಿನ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಅಪ್ಪಳಿಸಿ ಧ್ವಂಸ ಮಾಡಿದ ಶಾಸಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement